ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಪರಂಪರೆಯಲ್ಲಿ ಚಿರಸ್ಮರಣೀಯ ಹೆಸರು. ಪೂಜ್ಯರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20ನೆಯ ಜಗದ್ಗುರುಗಳಾಗಿ ಬಸವಜಯಂತಿಯಂದು (10-5-1940) ಪಟ್ಟಾಭಿಷಿಕ್ತರಾದಾಗ ಮಠದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಶಿಷ್ಯರಲ್ಲಿ ಸಂಘಟನೆ ಇರಲಿಲ್ಲ. ವಿದ್ಯೆಯ ಗಂಧವೂ ಇಲ್ಲದ ಕೃಷಿಕ ಭಕ್ತರೇ ಹೆಚ್ಚು. ಆಂತರಿಕ ಮತ್ತು ಬಾಹ್ಯ ವೈರಿಗಳು ಬೇರೆ. ಅಜ್ಞಾನ ಪರಮಶತ್ರು ಎಂದು ಭಾವಿಸಿದ ಪೂಜ್ಯರು 1962ರಲ್ಲಿ 'ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ'ಯನ್ನು ಸ್ಥಾಪಿಸಿ ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ 150ಕ್ಕಿಂತ ಹೆಚ್ಚು ಶಾಲಾ-ಕಾಲೇಜು, ವಿದ್ಯಾರ್ಥಿನಿಲಯಗಳನ್ನು ತೆರೆದರು. ಕಲೆ, ಸಾಹಿತ್ಯ, ಸಂಗೀತದ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿದರು. ಪೂಜ್ಯರ ಕಾಯಕ ಶ್ರದ್ಧೆ, ಸತತ ಪರಿಶ್ರಮ, ಸಾಮಾಜಿಕ ಚಿಂತನೆ, ಆಧ್ಯಾತ್ಮಿಕ ಸಾಧನೆ ಪೀಠಕ್ಕೆ ಅದ್ಭುತ ಶಕ್ತಿಯನ್ನು ತಂದುಕೊಟ್ಟಿತು. 'ತರಳಬಾಳು ಹುಣ್ಣಿಮೆ' ಮೂಲಕ ಜನಜಾಗೃತಿ ಮಾಡಿದರು. ಸರ್ವಶರಣ ಸಮ್ಮೇಳನಗಳ ಮೂಲಕ ಜನರಲ್ಲಿ ಶರಣರ ವಿಚಾರಗಳ ಬಗ್ಗೆ ಒಲವು ಮೂಡುವಂತೆ ಮಾಡಿದರು. ಭಕ್ತರಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಪ್ರಜ್ಞೆಯನ್ನು ಮೂಡಿಸಿದರು.

ಪೂಜ್ಯರು ಕಾಶಿಯಲ್ಲಿ ಸಂಸ್ಕೃತ ಓದಿದವರಾಗಿದ್ದರೂ ಗ್ರಾಮೀಣ ಜನರ ಭಾಷೆಯಲ್ಲೇ ಮಾತನಾಡಿ ಅವರ ನೋವು ನಲಿವುಗಳಿಗೆ ಸ್ಪಂಧಿಸುತ್ತಿದ್ದರು. ಅವರ ಮಾತು ಮತ್ತು ಬರವಣಿಗೆ ಅತ್ಯಂತ ನೇರ, ಸರಳ. ’ಶತಮಾನೋತ್ಸವ ಸಂದೇಶ’ ಎನ್ನುವ ಅವರ ಬಿಡಿ ಲೇಖನಗಳ ಸಂಗ್ರಹ ಇದಕ್ಕೆ ಸಾಕ್ಷಿಯಾಗಿದೆ.ವಿಶ್ವಬಂಧು ಮರುಳಸಿದ್ಧರ ಬಗೆಗೆ ಹಲವು ಸಂಶೋಧನಾತ್ಮಕ ಲೇಖನಗಳಲ್ಲದೆ ’ವಿಶ್ವಬಂಧು ಮರುಳಸಿದ್ಧ’ ಎನ್ನುವ ಅಪರೂಪದ ನಾಟಕವನ್ನೂ ರಚಿಸಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ ಮುಂತಾದ ಶರಣರ ಬಗ್ಗೆ ತಮಗಿದ್ದ ಗೌರವದ ಸಂಕೇತವಾಗಿ ’ಮರಣವೇ ಮಹಾನವಮಿ’, ’ಶರಣ ಸತಿ -ಲಿಂಗ ಪತಿ’ ಎನ್ನುವ ಮಹತ್ವದ ನಾಟಕಗಳನ್ನು ಸಹ ರಚಿಸಿ ತರಳಬಾಳು ಕಲಾಸಂಘದ ಮೂಲಕ ಸಹಸ್ರಾರು ಪ್ರಯೋಗಗಳನ್ನು ಕರ್ನಾಟಕದ ಒಳ ಹೊರಗೆ ಏರ್ಪಡಿಸಿ ಶರಣರ ಬಗ್ಗೆ ಎಲ್ಲರಲ್ಲೂ ಒಲವು ಮೂಡುವಂತೆ ಮಾಡಿದ್ದಾರೆ. ಶರಣರ ವಿಚಾರಗಳ ಪ್ರತಿಪಾದನೆಗಾಗಿಯೇ ಅಕ್ಕನ ಬಳಗ,ಅಣ್ಣನ ಬಳಗ ಸ್ಥಾಪಿಸಿದ್ದು ಗಮನಾರ್ಹ. ತಮ್ಮ ಶಿಷ್ಯರನ್ನು ನಿಜಜಂಗಮರೆಂದು ಭಾವಿಸಿ ಗೌರವಿಸುತ್ತಿದ್ದ ರೀತಿ ಅವಿಸರಣೀಯ.

ತಮ್ಮ 60ನೆಯ ವಯಸ್ಸಿಗೆ ಪೀಠದಿಂದ ನಿವೃತ್ತಿ ಆಗುವುದಾಗಿ ಹೇಳಿ 24-4-1974 ರಲ್ಲಿ ಸಮಾಜಕ್ಕೆ ತ್ಯಾಗಪತ್ರ ಸಲ್ಲಿಸಿ ಮಠಗಳ ಪರಂಪರೆಯಲ್ಲೇ ಹೊಸ ಪರಿಪಾಠ ಹಾಕಿಕೊಟ್ಟರು. ಅಜ್ಞಾನಿ ಭಕ್ತರು ಸುಜ್ಞಾನಿಗಳಾಗಲು, ದುಗ್ಗಾಣಿ ಮಠ ದುಡಿಯುವ ಮಠವಾಗಲು ಅವರ ನಿರಂತರ ಶ್ರದ್ಧೆ, ಕಾರ್ಯನಿಷ್ಠೆಗಳೇ ಕಾರಣವಾಗಿವೆ. ಅವರು ಕೇವಲ ಒಬ್ಬ ಮಠಾಧೀಶರಾಗಿರದೆ ಸಾಹಿತಿಗಳು, ಸಮಾಜ ಸುಧಾರಕರು, ರಾಜಕೀಯ ಮಾರ್ಗದರ್ಶಕರು, ಧಾರ್ಮಿಕ ನೇತಾರರು - ಅಷ್ಟೇ ಅಲ್ಲ; ಸಾಂಸ್ಕತಿಕ ಹರಿಕಾರರೂ ಆಗಿದ್ದರು. ’ತರಳಬಾಳು ಕಲಾಸಂಘ’ದ ಮೂಲಕ ತತ್ವಭರಿತ ಹಲವು ನಾಟಕಗಳನ್ನು ಕರ್ನಾಟಕದಾದ್ಯಂತ ಪ್ರದರ್ಶಿಸಿದರು. ತಾವೇ ಶರಣರಿಗೆ ಸಂಬಂಧಿಸಿದ ನಾಟಕಗಳನ್ನು ರಚಿಸಿ ಬಸವಾದಿ ಶರಣರ ಸಂದೇಶಗಳನ್ನು ರಂಗಭೂಮಿಯ ಮೂಲಕ ಪ್ರಸಾರ ಮಾಡಿದರು.ಕೇವಲ ಮುಗ್ಧ ಭಕ್ತರ ಕಾಣಿಕೆ ಪಡೆದು ಕಾಲಿಗೆ ಬೀಳಿಸಿಕೊಂಡು ಮಂತ್ರಾಕ್ಷತೆಯನ್ನೋ, ಪ್ರಸಾದವನ್ನೋ, ಬೂದಿಯನ್ನೋ ಕೊಟ್ಟು ಜನರಲ್ಲಿ ಮೌಢ್ಯ ಬೆಳಸಿದವರಲ್ಲ. 28-4-1914 ರ ಬಸವಜಯಂತಿಯಂದು ಜನಿಸಿದ ಇವರು ಬಸವಣ್ಣನವರ ತತ್ವಗಳಂತೆ ನಡೆದುಕೊಂಡರು. ಮಠಗಳ ಪರಂಪರೆಯಲ್ಲೇ ಕ್ರಾಂತಿಕಾರಿ ಸ್ವಾಮಿಗಳೆನ್ನಿಸಿ ನಾಲ್ಕು ದಶಕಗಳ ಕಾಲ ದಣಿವರಿಯದೆ ದುಡಿದು, ಸಮರ್ಥ ಉತ್ತರಾಧಿಕಾರಿಯನ್ನು ಕರುಣಿಸಿ 24-9-1992ರಲ್ಲಿ ಶಿವನ ಪಾದ ಸೇರಿದರು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

More Info

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು

More Info

ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು

More Info

 

 

 

 

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS