ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತೆ : ಶ್ರೀಮತಿ ಮಾಲತಿಶ್ರೀ(2008) :

ಶ್ರೀಮತಿ ಮಾಲತಿಶ್ರೀ(2008)ಕನ್ನಡ ವೃತ್ತಿರಂಗಭೂಮಿಯ ಶ್ರೇಷ್ಠ ನಟಿಯರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಮಾಲತಿಶ್ರೀ ಮೈಸೂರು. ಪಾತ್ರ ಯಾವುದೇ ಇರಲಿ ಅದಕ್ಕೆ ಸಹಜತೆ, ಜೀವಂತಿಕೆ ತುಂಬುವ ಕಲೆ ಅವರಲ್ಲಿ ಕರಗತವಾಗಿಬಿಟ್ಟಿದೆ. ನಾಯಕಿಯಾಗಿ, ಖಳನಾಯಕಿಯಾಗಿ, ಹಾಸ್ಯ ನಟಿಯಾಗಿ-ಒಟ್ಟಾರೆ ಒಂದು ನಾಟಕದ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕಳೆದ ನಾಲ್ಕೂವರೆ ದಶಕಗಳ ಕಾಲ ಅವರು ವೃತ್ತಿರಂಗಭೂಮಿಯಲ್ಲಿ ವಿಸ್ತೃತವಾಗಿ ಬೆಳೆದಿದ್ದಾರೆ. ಗಾಯನ ಹಾಗೂ ಅಭಿನಯ ಎರಡೂ ಮೇಳೈಸಿರುವ ವಿರಳ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಮೈಸೂರಿನ ಮಾಲತಿಶ್ರೀ ಮೈಸೂರು ಭಾಗಕ್ಕಿಂತ ಉತ್ತರ ಕರ್ನಾಟಕದಲ್ಲೇ ಹೆಚ್ಚು ಕೆಲಸ ಮಾಡಿದ್ದಾರೆ.
ಕೆಂಪೇಗೌಡ-ಸಿದ್ಧಮ್ಮ ದಂಪತಿಗೆ ಜನಿಸಿದ ಮಾಲತಿಶ್ರೀ ಮೈಸೂರಿನಲ್ಲಿ ಕ್ಯಾಂಪ್ ಮಾಡಿದ್ದ ಶ್ರೀ ಕಂಠಮೂರ್ತಿ ನಾಟಕ ಕಂಪನಿಯಲ್ಲಿ ಎಂಟನೆಯ ವಯಸ್ಸಿಗೆ ಪ್ರವೇಶ ಮಾಡಿ ಶನಿಮಹಾತ್ಮೆ, ಸತ್ಯಹರಿಶ್ಚಂದ್ರ, ರಾಮಾಯಣ ಮುಂತಾದ ನಾಟಕಗಳಲ್ಲಿ ಬಾಲ ಪಾತ್ರಧಾರಿಯಾಗಿ ರಂಗಭೂಮಿಗೆ ಕಾಲಿಟ್ಟವರು. ನಂತರ ಅರ್ ನಾಗರತ್ನಮ್ಮನವರ ಸ್ತ್ರೀ ನಾಟಕಮಂಡಳಿಯಲ್ಲೂ ಕೆಲ ಕಾಲ ಬಾಲಪಾತ್ರ ಮಾಡಿದರು. ಆ ದಿನಗಳಲ್ಲೇ ವೃತ್ತಿ ನಟಿಯಾಗಿ ಉಳಿಯುವ ಸಂಕಲ್ಪ ಮಾಡಿದ ಅವರು ಹದಿನಾಲ್ಕರ ಹರೆಯದಲ್ಲಿ ಹಾವೇರಿಯಲ್ಲಿ ಕ್ಯಾಂಪ್ ಮಾಡಿದ್ದ ಗೋಕಾಕ ಬಸವಣ್ಣೆಪ್ಪ ನಾಟಕ ಕಂಪನಿಗೆ ನಡೆದೇ ಬಿಟ್ಟರು. ಅದು ಆ ಕಾಲಕ್ಕೆ ಕಲಾವಿದರನ್ನು ತಯಾರಿಸುವ ಕಾರ್ಖಾನೆ ಎಂದೇ ಪ್ರತೀತಿಯಾಗಿತ್ತು. ಬಸವಣ್ಣೆಪ್ಪ ಮತ್ತು ಅಂಬುಜಮ್ಮ ಅವರ ಬಳಿ ಅಭಿನಯದ ಬಹುತೇಕ ಪಟ್ಟುಗಳನ್ನು ಕಲಿತರು. ಅದು ಪೌರಾಣಿಕ ನಾಟಕಗಳಿಂದ ಸಾಮಾಜಿಕ ನಾಟಕಗಳತ್ತ ಸಾಗುವ ಸ್ಥಿತ್ಯಂತರದ ಕಾಲ. ಗೋಕಾಕ ಕಂಪನಿಯಲ್ಲಿ ಸೊಸೆ ತಂದ ಸೌಭಾಗ್ಯ (ಚಿಕ್ಕ ಸೊಸೆ), ಸಂಪತ್ತಿಗೆ ಸವಾಲು, ಗಂಡನ ಮಾನ, ಸುಖದ ಸುಪ್ಪತ್ತಿಗೆ ಪ್ರಸಿದ್ಧ ನಾಟಕಗಳು. ಆರಂಭದಲ್ಲಿ ಯಾವುದೇ ಪಾತ್ರ ದೊರೆತರೂ ಅದರಲ್ಲಿ ಅವರು ಅಭಿನಯಿಸಿ, ಸೈ ಎನಿಸಿಕೊಂಡರು. ಈ ಮಧ್ಯೆ ಮಾಸ್ಟರ್ ಹಿರಣ್ಣಯ್ಯ ಮಿತ್ರಮಂಡಳಿಗೆ ಬುಲಾವ್ ಬಂತು ದೇವದಾಸಿ ನಾಟಕದ ಮುಖ್ಯಪಾತ್ರ ಮಣಿಮಂಜರಿ ಸೇರಿದಂತೆ, ಲಂಚಾವತಾರದಲ್ಲಿ ಅವಶ್ಯಬಿದ್ದ ಎಲ್ಲ ಪಾತ್ರಗಳಲ್ಲಿ ಅಭಿನಯಿಸಿದರು. ನಂತರ ಯಾವುದೇ ಕಂಪನಿಯ ಯಾವುದೇ ಪಾತ್ರಗಳಲ್ಲಿ ಅಭಿನಯಿಸಬಲ್ಲೆನೆಂಬ ಅತ್ಮವಿಶ್ವಾಸ ಮೂಡಿತು.
ಆ ಕಾಲಕ್ಕೆ ಕಮತಗಿ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ ಪ್ರತಿಷ್ಠಿತ ಕಂಪನಿಗಳ ಪೈಕಿ ಒಂದಾಗಿತ್ತು. ಹಿತೈಷಿಗಳ ಸಲಹೆಯ ಮೇಲೆ ಅಲ್ಲಿಗೆ ನಡೆದರು. ಅದರ ಮಾಲಿಕ ಭೀಮಣ್ಣ ಅರಿಶಿನಗೋಡಿ ಜನಪ್ರಿಯ ನಟ ಹಾಗೂ ಬಸ್‌ಕಂಡಕ್ಟರ್ ಸೇರಿದಂತೆ ಹದಿನೈದು ನಾಟಕಗಳನ್ನು ರಚಿಸಿದ ಹೆಸರಾಂತ ನಾಟಕಕಾರ. ಕಂಪನಿ ಸೇರಿದ ಕೆಲ ತಿಂಗಳುಗಳ ನಂತರ ಅರಿಶಿನಗೋಡಿ ಅವರೊಂದಿಗೆ ಪ್ರೇಮ ಅಂಕುರಿಸಿ ಅವರನ್ನು ವರಿಸಿ ತಮ್ಮ ವೃತ್ತಿ ಜೀವನದ ಅಮೂಲ್ಯ ಮೂರು ದಶಕಗಳನ್ನು ಅಲ್ಲೇ ಕಳೆದರು. ನಾಯಕಿ, ಖಳನಾಯಕಿ, ಹಾಸ್ಯ ನಟಿಯಾಗಿ ಆ ಕಂಪನಿಯ ಎಲ್ಲ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಬಹು ಎತ್ತರಕ್ಕೆ ಬೆಳೆದರು. ಜೊತೆಗೆ ಕಂಪನಿಯ ಅಭ್ಯುದಯಕ್ಕೂ ಕಾರಣರಾದರು. ಬಸ್ ಕಂಡಕ್ಟರ್, ಗರಿಬೀ ಹಠಾವೋ, ಗೆದ್ದವರು ಯಾರು?, ನಕಲಿ ಸಂಪನ್ನರು, ಗೌಡ್ರ ಗದ್ಲ, ಸಿಂಧೂರ ಲಕ್ಷ್ಮಣ, ಜೈ ಜವಾನ್ ಜೈ ಕಿಸಾನ್, ಕಾನೂನಿಗೆ ಸವಾಲ್, ಭೂಮಿ ತೂಕದ ಹೆಣ್ಣು ಒಂದೇ ಎರಡೇ! ಒಟ್ಟು ಅರವತ್ತು ಶೀರ್ಷಿಕೆಗಳ ಸಾವಿರಾರು ನಾಟಕ ಪ್ರದರ್ಶನಗಳು. ನಿತ್ಯ ಒಂದು, ಎರಡು ಕೆಲವೊಮ್ಮೆ ಮೂರು ಪ್ರದರ್ಶನಗಳೂ ನಡೆಯುತ್ತಿದ್ದವು.
೧೯೯೭ರಲ್ಲಿ ಗಂಗಾವತಿಯಲ್ಲಿ ಗರಿಬೀ ಹಠಾವೋ ೧೫೦,೧೯೮೦ರಲ್ಲಿ ಕಲ್ಬುರ್ಗಿಯಲ್ಲಿ ರೀತಿ ತಪ್ಪಿದರೂ ನೀತಿ ಬಿಟ್ಟಿಲ್ಲ ಸತತ ೨೫೦, ೧೯೮೪ರಲ್ಲಿ ವಿಜಾಪುರದಲ್ಲಿ ಗೌರಿ ಹೋದಳು ಗಂಗೆ ಬಂದಳು ನಿರಂತರ ೧೨೫,ತೀರ್ಥಹಳ್ಳಿಯಲ್ಲಿ ಕಿವುಡ ಮಾಡಿದ ಕಿತಾಪತಿಯ ನೂರಕ್ಕೂ ಹೆಚ್ಚು ಪ್ರಯೋಗ, ೧೯೯೭ರಲ್ಲಿ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಎಚ್ಚರ ತಂಗಿ ಎಚ್ಚರ ನಾಟಕದ ೨೫೦ ಸತತ ಪ್ರಯೋಗ. ಇವು ಮಾಲತಿಶ್ರೀ ಅಭಿನಯಿಸಿದ ಕೆಲವು ಸ್ಯಾಂಪಲ್ಲುಗಳು ಮಾತ್ರ. ಅರಿಶಿನಗೋಡಿ ಅವರೊಂದಿಗೆ ಕಂಪನಿಯ ಉಸ್ತುವಾರಿ.
ಇದರಾಚೆಗೆ ಮತ್ತೆನೂ ಇಲ್ಲವೇನೋ ಎಂಬಂತೆ ನಟಿಸುತ್ತಲೇ ಬಂದರು. ಇದುವರೆಗೆ ಅವರು ಅಭಿನಯಿಸಿದ ನಾಟಕ ಪ್ರದರ್ಶನಗಳ ಸಂಖ್ಯೆ ೧೧ಸಾವಿರವನ್ನು ದಾಟುತ್ತದೆ. ಇಲ್ಲಿಗೆ ಬಂತೋ ಸಂಗಯ್ಯ ನಾಟಕದ ಹುಚ್ಚಿ ರೂಪಾಳ ಪಾತ್ರ, ಗೆದ್ದವರು ಯಾರೋ? ನಾಟಕದ ಪುಟ್ಟಿಯ ಹಾಸ್ಯ ಪಾತ್ರ, ಮಲಮಗಳು ನಾಟಕದ ಮಲಮಗಳು ಕಲ್ಯಾಣಿ ಪಾತ್ರ, ಸೋತುಗೆದ್ದ ಸಾಧ್ವಿಯಲ್ಲಿ ಸಾಧ್ವಿಯಾಗಿ, ಗುರುಪುತ್ರಿ ನಾಟಕದಲ್ಲಿ ಗುರುಪುತ್ರಿಯಾಗಿ, ಗಂಡೆದೆಯ ಗೌರಿ ನಾಟಕದಲ್ಲಿ ಗೌರಿಯಾಗಿ ನಟಿಸಿದ ಪಾತ್ರಗಳು ಇಂದಿಗೂ ಮನೆಮಾತಾಗಿವೆ.
ನಾಟಕ ಕಂಪನಿ ಕ್ಯಾಂಪ್ ಮಾಡಿದ ಊರಲ್ಲಿನ ಸ್ಥಳೀಯರ ಒತ್ತಾಯಕ್ಕೆ ಅಥವಾ ಕಂಪನಿಗೆ ಕಲೆಕ್ಷನ್ ಕಡಿಮೆಯಾದಾಗ ಸಿನಿಮಾ ನಟ ನಟಿಯರನ್ನು ಪಾತ್ರದಲ್ಲಿ ಅಭಿನಯಿಸಲು ಅತಿಥಿ ಕಲಾವಿದರಾಗಿ ಆಹ್ವಾನಿಸಿದಂತೆ ಕಂಪನಿಯಲ್ಲಿರುವ ಕೆಲವು ಪ್ರತಿಭಾವಂತ ರಂಗಕಲಾವಿದರು ಸಹ ಸಿನಿಮಾ ನಟ (ನಟಿ) ಊರಲ್ಲಿನ ಸ್ಥಳೀಯರ ಒತ್ತಾಯಕ್ಕೆ ಅಥವಾ ಕಂಪನಿಗೆ ಕಲೆಕ್ಷನ್ ಕಡಿಮೆಯಾದಾಗ ಸಿನಿಮಾ ನಟ ನಟಿಯರನ್ನು ಪಾತ್ರದಲ್ಲಿ ಅಭಿನಯಿಸಲು ಅತಿಥಿ ಕಲಾವಿದರಾಗಿ ಆಹ್ವಾನಿಸಿದಂತೆ ಕಂಪನಿಯಲ್ಲಿರುವ ಕೆಲವು ಪ್ರತಿಭಾವಂತ ರಂಗಕಲಾವಿದರು ಸಹ ಸಿನಿಮಾ ನಟ (ನಟಿ) ರಷ್ಟೇ ಜನಪ್ರಿಯರೂ ಆಗಿದ್ದರು. ಅಂತಹ ಪ್ರಖ್ಯಾತರನ್ನು ಇಂಥವರು ಈ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಕರಪತ್ರದಲ್ಲಿ ವಿಶೇಷವಾಗಿ ಅಚ್ಚು ಹಾಕಿಸಲಾಗುತ್ತಿತ್ತು. ಈ ರೀತಿಯ ಪ್ರಖ್ಯಾತಿಯನ್ನು ಮಾಲತಿಶ್ರೀಯವರು ಪಡೆದಿದ್ದರು. ತಮ್ಮದೇ ನಾಟಕ ಕಂಪನಿಯಲ್ಲಿ ತಾವೇ ಅತಿಥಿ ನಟಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು.
ವೃತ್ತಿಕಲಾವಿದೆಯರೆಂದರೆ ಅವರದೇ ಶೈಲೀಕೃತ ಅಭಿನಯಕ್ಕೆ ಸೀಮಿತ. ಎಲ್ಲ ರೀತಿಯ ಪಾತ್ರಗಳಿಗೆ ಹೊಂದಿಕೊಳ್ಳುವ ಸಹಜತೆ ಇರುವುದಿಲ್ಲ ಎಂದು ಭಾವಿಸಲಾಗುತ್ತದೆ.ಆದರೆ ಮಾಲತಿಶ್ರೀ ಅದಕ್ಕೆ ಅಪವಾದ. ಮಾಲತಿಶ್ರೀಯವರ ರಂಗ ಜೀವನದ ಅನುಭವಗಳನ್ನಾಧರಿಸಿ ರಚಿಸಿದ ತೆರೆ ಸರಿದಾಗ ಆತ್ಮಕತೆ ಸುಧಾ ಪತ್ರಿಕೆಯಲ್ಲಿ 20 ವಾರಗಳ ಕಾಲ ಧಾರವಾಹಿಯಾಗಿ ಮೂಡಿಬಂತು. ಅದೀಗ ಪುಸ್ತಕರೂಪದಲ್ಲೂ ಪ್ರಕಟವಾಗಿದೆ. ಪ್ರಸ್ತುತ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ. ರೇಡಿಯೋ, ಕ್ಯಾಸೆಟ್ , ನಾಟಕಗಳಿಗೆ ಧ್ವನಿ ನೀಡಿರುವ ಮಾಲತಿಶ್ರೀ ಹವ್ಯಾಸಿ, ಪೌರಾಣಿಕ ನಾಟಕ ತಂಡಗಳಲ್ಲಿ ಅಲ್ಲದೆ ಸಾಕ್ಷ್ಯಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅವರ ಕಂಪನಿ ನಿಂತುಹೋದನಂತರ ಬೆಂಗಳೂರಿನಲ್ಲಿ ನೆಲೆಸಿರುವ ಮಾಲತಿಶ್ರೀ ಪ್ರಸ್ತುತ ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮತಿಯಿಂದ ಆರಂಭಿಸಿ ನಾಕುತಂತಿ, ಮಹಾಯಾನ, ಕಲ್ಯಾಣ ರೇಖೆ, ಮಣ್ಣಿನ ಋಣ ಮುಂತಾದ ನಲವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ರೇಣುಕಾದೇವಿ, ಮೈ ಆಟೋಗ್ರಾಫ್, ಮನ್ಮಥ, ತೆನಾಲಿರಾಮ ಮುಂತಾದ ೧೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಪನೋರಮಾಕ್ಕೆ ಆಯ್ಕೆಯಾದ ಮಗ್ಗಿನ ಜಡೆ ಸಿನಿಮಾದಲ್ಲಿ ಪ್ರಮುಖವಾದ ತಾಯಿ ಪಾತ್ರದಲ್ಲಿ ಮನೋಜ್ಞಅಭಿನಯ ನೀಡಿದ್ದಾರೆ.ಈ ಪಾತ್ರಕ್ಕಾಗಿ ಅವರಿಗೆ ಚಲನಚಿತ್ರ ನಿರ್ದೇಶಕರ ಸಂಘದ ಪ್ರಶಸ್ತಿಯೂ ಪ್ರಾಪ್ತವಾಗಿದೆ.ಟಿವಿಯಲ್ಲಿ ನಟಿಸುವ ಜೊತೆಗೆ ಬೆಂಗಳೂರಿನಲ್ಲಿ ಆಶಾಕಿರಣ ಕಲಾಸಂಘ ಎಂಬ ಮಹಿಳೆಯರ ನಾಟಕ ತಂಡವೊಂದನ್ನು ರಚಿಸಿಕೊಂಡಿದ್ದಾರೆ.ಇದರಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲ ಪಾತ್ರಗಳಲ್ಲೂ ಮಹಿಳೆಯರೇ ಅಭಿನಯಿಸುತ್ತಾರೆ. ಈ ತಂಡದ ಬಸ್ ಕಂಡಕ್ಟರ್, ಮಲಮಗಳು ನಾಟಕಗಳು ಬೆಂಗಳೂರು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗ ಕಂಡಿವೆ.
ಕರ್ನಾಟಕ ನಾಟಕ ಆಕಾಡೆಮಿಯ ಪ್ರಶಸ್ತಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ಅಭಿಮಾನಿಗಳ ಪ್ರಶಸ್ತಿ - ಸನ್ಮಾನಗಳನ್ನು ಪಡೆದಿರುವ ಮಾಲತಿಶ್ರೀಯವರಿಗೆ ಇದೀಗ ಮತ್ತೊಂದು ಪ್ರತಿಷ್ಠಿತ ಶಿವಕುಮಾರ ಪ್ರಶಸ್ತಿಯ ಗರಿ.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS