ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು. ಅಲ್ಲಿಂದ 3.5 ಕಿ ಮೀ ನಡೆದರೆ ಸಾಣೇಹಳ್ಳಿ ಸಿಗುವುದು. ಈ ಊರಿಗೆ ಐತಿಹಾಸಿಕ ಮಹತ್ವವಿದೆ. ಗಂಗರು, ಹೊಯ್ಸಳರು, ಪಲ್ಲವರು, ನೊಳಂಬರು ಆಳಿದ 'ನೀಲಾವತಿ' ಪಟ್ಟಣವೇ ಇಂದಿನ 'ನೀರಗುಂದ'. ಇದು ಸಾಣೇಹಳ್ಳಿಯಿಂದ 2 ಕಿ ಮೀ ದೂರದಲ್ಲಿದೆ.ಕ್ರಿ ಶ 1660ರಲ್ಲಿ 'ನೀಲಾವತಿ' ಪಟ್ಟಣದ ರಾಜರುಗಳ ಸೈನ್ಯಕ್ಕೆ ಬೇಕಾದ ಆಯುಧಗಳಿಗೆ ಸಾಣೇ ಹಿಡಿಯುತ್ತಿದ್ದ 'ಸಾಣೇಗಾರರ ಕೇರಿ' ಇಂದಿನ ಸಾಣೇಹಳ್ಳಿ. ಅಂದು ಆಯುಧಗಳಿಗೆ ಸಾಣೇ ಹಿಡಿಯುತ್ತಿದ್ದರೆ ಇಂದು ಜನರ ಬೌದ್ಧಿಕ, ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಬದುಕಿಗೆ ಸಾಣೇ ಹಿಡಿಯಲಾಗುತ್ತಿದೆ. ಸಮಶೀತೋಷ್ಣ ಪ್ರದೇಶದ ಸಾಣೇಹಳ್ಳಿಯ ಭೂಮಿ ಅಷ್ಟೇನೂ ಫಲವತ್ತಾದುದಲ್ಲ. ಆದರೂ ತೆಂಗು ಬೆಳೆಯಲು ಸೂಕ್ತವಾದುದು.ತೆಂಗಿನ ತೋಟಗಳಿಂದ ಈ ಊರು ಆವೃತವಾಗಿದ್ದರೂ ಮಳೆಯ ಅಭಾವ,ನುಸಿಪೀಡೆಯ ಕಾಟದಿಂದ ಇಂದು ಮನೆ ಬಳಕೆಗೂ ತೆಂಗಿನಕಾಯಿ ಸಿಗದಂತಾಗಿದೆ. 1964ರ ಪೂರ್ವದಲ್ಲಿ ಆಧುನಿಕ ಸೌಕರ್ಯಗಳಿಲ್ಲದೆ ಕೇವಲ ಗುಡಿಸಲುಗಳಿಂದ ಕೂಡಿದ ಕುಗ್ರಾಮವಾಗಿತ್ತು. 1964 ರಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಇಲ್ಲಿ ಒಂದು ಪ್ರೌಢಶಾಲೆ ಪ್ರಾರಂಭಿಸಿದ್ದೇ ತಡ; ಊರು ಬೆಳಕಿನೆಡೆಗೆ ಯಾನ ಆರಂಭಿಸಿತು.

ಸಾಣೇಹಳ್ಳಿಯ ಜನರು ದೈಹಿಕವಾಗಿ ಸಬಲರಾಗಿದ್ದರೂ ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ದುರ್ಬಲರಾಗಿದ್ದರು. 32 ವರ್ಷಗಳ ಹಿಂದೆ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ ಒಂದು ದ್ವೀಪದಂತಿತ್ತು ಈ ಊರು.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಪಟ್ಟಾಭಿಷೇಕದ(25/12/1977)ನಂತರ ಸಾಣೇಹಳ್ಳಿ ಪ್ರಪಂಚಕ್ಕೆ ತೆರೆದುಕೊಂಡಿತು. ಶ್ರೀ ಸ್ವಾಮಿಗಳು ಪ್ರೀತಿಯಿಂದ ಜನರ ವಿಶ್ವಾಸ ಗಳಿಸಿ ಅವರಲ್ಲಿ ಜ್ಞಾನದಾಹ ಹೆಚ್ಚುವಂತೆ ಮಾಡಿದರು.ಸಾಂಸ್ಕೃತಿಕ ಶ್ರೀಮಂತಿಕೆಯ ಮಹತ್ವ ತಿಳಿಸಿ ಸಾರ್ವಜನಿಕ ಸೇವಾಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿದರು.ತತ್ಫಲವಾಗಿ ಜನರ ಜಾಡ್ಯ ಕಡಿಮೆಯಾಗಿ ಅವರಲ್ಲಿ ಜಂಗಮತ್ವ ಅರಳಲಾರಂಭಿಸಿತು.ಈ ಸಣ್ಣ ಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಜಾನಪದ ಮೇಳ, ನಾಟಕೋತ್ಸವ, ಶಿವಾನುಭವ ಶಿಬಿರ,ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರ ಸಮ್ಮಿಲನ, ದಂದಣ-ದತ್ತಣ ಗೋಷ್ಠಿಗಳಂಥ ಹತ್ತು ಹಲವು ಮಹತ್ವದ ಕಾರ್ಯಕ್ರಮಗಳು ನಡೆಯುವಂತಾಯಿತು.ಸಾಂಸ್ಕೃತಿಕವಾಗಿ ಬರಡಾಗಿದ್ದ ನೆಲದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ ಚಿಗುರೊಡೆಯಲು ಸಾಧ್ಯವಾಯಿತು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು 20 ನೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕರಕಮಲ ಸಂಜಾತರು.’ಜ್ಯೋತಿ ಮುಟ್ಟಿ ಜ್ಯೋತಿಯಪ್ಪಂತೆ’ತಮ್ಮ ಆಧ್ಯಾತ್ಮಿಕ ಪಿತರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಸೇವಾಕಾರ್ಯಗಳನ್ನು ಈ ಪುಟ್ಟ ಸಾಣೇಹಳ್ಳಿಯಲ್ಲಿ ಮುಂದುವರಿಸಿದ್ದಾರೆ. ಅವರ ಎಲ್ಲ ಸೇವಾ ಕಾರ್ಯಗಳಿಗೆ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದ, ಮಾರ್ಗದರ್ಶನವಿದೆ.ತತ್ಫಲವಾಗಿ ಅನಾಮಧೇಯವಾಗಿದ್ದ ಈ ಹಳ್ಳಿ ಇಂದು ಅನೇಕ ಪ್ರಗತಿಪರ ಚಿಂತಕರ ತವರೂರಿನಂತಾಗಿ ರಾಜ್ಯ,ರಾಷ್ಟ್ರದ ಗಮನ ಸೆಳೆಯುವಂತಾಗಿದೆ.ಇದಕ್ಕೆ ಕಾರಣ ಇಲ್ಲಿ ನಡೆಯುತ್ತಿರುವ ವೈವಿಧ್ಯಮಯವಾದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು.

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

More Info

ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

More Info

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು

More Info

ಸಾಣೇಹಳ್ಳಿಯಲ್ಲಿರುವ ವಿವಿಧ ಸೇವಾಸಂಸ್ಥೆಗಳು

More Info

 

 

 

 

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS