ರಂಗ ಪ್ರಯೋಗಶಾಲೆ :
ಪ್ರತಿ ಹತ್ತು ವರ್ಷಗಳಿಗೊಮ್ಮೆ ಹೊಸ ಆಯಾಮ ಪಡೆದುಕೊಳ್ಳುತ್ತ ಬಂದಿರುವ ನಮ್ಮ ಕಲಾಸಂಘ 2008 ಜುಲೈ
25ರಂದು ಅಧಿಕೃತವಾಗಿ ಶ್ರೀ ಶಿವಕುಮಾರ ರಂಗ ಪ್ರಯೋಗಶಾಲೆಯನ್ನು ಪ್ರಾರಂಭಿಸಿದೆ.ಇದನ್ನು ವಿಶಿಷ್ಟ ರೀತಿಯಲ್ಲಿ
ಮುನ್ನಡೆಸಲು ಪ್ರಖ್ಯಾತ ರಂಗಕರ್ಮಿ ಶ್ರೀ ಚಿದಂಬರರಾವ್ ಜಂಬೆ ಅವರನ್ನು ಶಾಲೆಯ ಗೌರವ ನಿರ್ದೇಶಕರನ್ನಾಗಿ
ಬರಮಾಡಿಕೊಳ್ಳಲಾಯಿತು. ಪ್ರತಿವರ್ಷ 20 ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ.ಇದು ವಸತಿಯುತ
ಶಾಲೆಯಾಗಿದ್ದು ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯೊಂದಿಗೆ ರಂಗ ಶಿಕ್ಷಣ ನೀಡಲಾಗುವುದು. ಅದಕ್ಕಾಗಿ ಸುಮಾರು ಒಂದು
ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಸುಸಜ್ಜಿತ ರಂಗ ಶಾಲಾ ಕಟ್ಟಡ ನಿರ್ಮಾಣವಾಗಿದೆ. 07-11-2008 ರಂದು ಶ್ರೀ
ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಾಗೂ ಕರ್ನಾಟಕದ ಮುಖ್ಯಮಂತ್ರಿ
ಶ್ರೀ ಬಿ ಎಸ್ ಯಡಿಯೂರಪ್ಪನವರು ಈ ಶಾಲೆಯ ಉದ್ಘಾಟನೆ ನೆರವೇರಿಸಿದ್ದಾರೆ.
ಡಾ|| ಕೆ ಮರುಳಸಿದ್ಧಪ್ಪನವರ ಅಧ್ಯಕ್ಷತೆಯಲ್ಲಿ ಪಠ್ಯರಚನಾ ಸಮಿತಿ ಮಾಡಿದ್ದು ಸದರಿ ಸಮಿತಿಯವರು ದೇಶದ ಹಲವು
ರಂಗ ಶಾಲೆಗಳ ಪಠ್ಯಕ್ರಮವನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣದಲ್ಲಿ ರಂಗಭೂಮಿ ಎಂಬ ವಿಶಿಷ್ಟ ಪಠ್ಯಕ್ರಮವನ್ನು ರೂಪಿಸಿದ್ದಾರೆ.
ಪಠ್ಯಕ್ರಮದ ಅನುಸಾರ ಸಂದರ್ಶಕ ಉಪನ್ಯಾಸಕರನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.ಒಂದು
ವರ್ಷದ ಅವಧಿಯಲ್ಲಿ ಯೋಗ, ಕಂಸಾಳೆ, ಯಕ್ಷಗಾನ, ಗಮಕ, ಮುಖವರ್ಣಿಕೆ, ಕೋಲಾಟ, ವೀರಗಾಸೆ, ಪ್ರಸಾಧನ, ನೆರಳ
ಬೆಳಕು ಕಾರ್ಯಾಗಾರಗಳಲ್ಲದೆ ಕನ್ನಡ ಸಾಹಿತ್ಯ ಪರಂಪರೆಯ ಪರಿಚಯವನ್ನು ನಾಡಿನ ಪ್ರಖ್ಯಾತ ತಜ್ಞರಿಂದ
ಮಾಡಿಸಲಾಗುವುದು. ತರಬೇತಿಯ ಅವಧಿಯಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ತಮ್ಮ ಕಲಾಕೌಶಲ
ಮೆರೆಯುವುದು. ಈ ಶಾಲೆಗೆ ಸೇರಬಯಸುವವರಿಗೆ ಕನಿಷ್ಠ ಎಸ್.ಎಸ್.ಎಲ್.ಸಿ ಮಟ್ಟದ ಶಿಕ್ಷಣವಾದರೂ ಆಗಿರಬೇಕು.