ಸಾಮಾಜಿಕ:
ಜನರು ಸಣ್ಣ ಸಣ್ಣ ಕಾರಣಗಳಿಗೆ ಜಗಳ ಮಾಡುವರು. ಅದು ವಿರಸಕ್ಕೆ ತಿರುಗಿ ಪೊಲೀಸ್ ಸ್ಟೇಷನ್, ನ್ಯಾಯಾಲಯಗಳ ಕಟ್ಟೆ ಹತ್ತಿ ಹಣ,ಸಮಯ ಎರಡನ್ನೂ ಕಳೆದುಕೊಂಡು ಸಾಕಪ್ಪಾ ಇದರ ಸಹವಾಸ ಎನ್ನುವ ವಾತಾವರಣ ಮೂಡಿದೆ.
ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಮಠದಲ್ಲಿ ನ್ಯಾಯ ಪಂಚಾಯತಿ ನಡೆಯುವುದು.ಪೂಜ್ಯ ಸ್ವಾಮಿಜಿಯವರು ತಮ್ಮಲ್ಲಿಗೆ ಬಂದ ದೂರಿನನ್ವಯ ಎರಡೂ ಗುಂಪಿನವರನ್ನು ಕರೆಸಿ ಅವರ ಅಹವಾಲುಗಳನ್ನು ಕೇಳಿ ಸೂಕ್ತ ನಿರ್ಣಯ ನೀಡುವರು.
' ಕೋರ್ಟಿಗೆ ಹೋಗಿ ಗೆದ್ದವ ಸೋತ, ಸೋತವ ಸತ್ತ 'ಎನ್ನುವ ಗಾದೆ ಇದೆ. ಇದು ನಮ್ಮ ಸ್ವಾಮಿಜಿಯವರ ನ್ಯಾಯಾಲಯಕ್ಕೆ ಅನ್ವಯಿಸುವುದಿಲ್ಲ. ಪರ ವಿರೋಧಿಗಳಿಬ್ಬರೂ ತಮಗೆ ಸರಿಯಾದ ನ್ಯಾಯ ದೊರೆಯಿತೆಂದು ಗುರುಗಳ ಬಗ್ಗೆ
ಗೌರವದಿಂದ ಮಾತನಾಡುವರು.
ಗ್ರಾಮಾಭಿವೃದ್ಧಿ:
ಸ್ವಸ್ತಿ, ಸ್ವಚ್ಛ ಗ್ರಾಮ ಯೋಜನೆಯಡಿಯಲ್ಲಿ ಸಾಣೇಹಳ್ಳಿಯ ಬಡವರಿಗೆ ಮನೆಗಳನ್ನು ಕಟ್ಟಿಸಲಾಗಿದೆ. ಊರಲ್ಲಿ ಟಾರು ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಸಾಕಷ್ಟು ಶೌಚಾಲಯಗಳಾಗಿವೆ.
ಸಾರ್ವಜನಿಕ ಗ್ರಂಥಾಲಯ ಬಂದಿದೆ. ಕೆಲವು ಮನೆಗಳ ಮೇಲ್ಛಾವಣಿ ದುರಸ್ತಿ ಮಾಡಿಸಲಾಗಿದೆ. ಅಂಚೆ, ಬ್ಯಾಂಕ್, ಟೆಲಿಫೋನ್ ಇತ್ಯಾದಿ ಆಧುನಿಕ ಸೌಲಭ್ಯಗಳು ಈ ಗ್ರಾಮಕ್ಕೆ ಕಾಲಿಟ್ಟಿರುವುದು ವಿಶೇಷ.
ಮರುಳಸಿದ್ಧ ಮಹಾಮನೆ:
ವಿದ್ಯಾರ್ಥಿಗಳ ಹಾಗೂ ಶ್ರೀಮಠಕ್ಕೆ ಬರುವ ಭಕ್ತರ ಪ್ರಸಾದದ ವ್ಯವಸ್ಥೆಗಾಗಿ ವಿಶಾಲವಾದ ಪ್ರಸಾದ ನಿಲಯವನ್ನು 'ಮರುಳಸಿದ್ಧರ' ಹೆಸರಿನಲ್ಲಿ ಕಟ್ಟಿಸಲಾಗಿದೆ. ಅದರಲ್ಲಿ 500 ಜನರು ಕುಳಿತು ಪ್ರಸಾದ ಸ್ವೀಕರಿಸಲು
ಅವಕಾಶವಿದೆ. ಟೇಬಲ್ ವ್ಯವಸ್ಥೆ ಇದೆ. ಅಡುಗೆ ಮಾಡಲು ಸ್ಟೀಮ್ ಅಳವಡಿಸಲಾಗಿದೆ.
ಶ್ರೀ ಗುರುಶಾಂತ ನಿಕೇತನ: ಶ್ರೀಮಠಕ್ಕೆ ಬರುವ ಭಕ್ತರ ವಸತಿಗಾಗಿ ಅತಿಥಿ ಗೃಹವಿದ್ದು ಐದು ಪ್ರತ್ಯೇಕ ಕೊಠಡಿಗಳಿವೆ. ಹೆಚ್ಚಿನ ಜನರು
ಬಂದರೆ ಅನುಕೂಲವಾಗಲಿ ಎಂದು ಒಂದು ಹಾಲ್ ವ್ಯವಸ್ಥೆಯನ್ನೂ ಮಾಡಲಾಗಿದೆ.ಇದು ತೆಂಗಿನ ತೋಟದ ನಡುವೆ ಇದ್ದು ಶುದ್ಧ ಗಾಳಿ, ಬೆಳಕು, ನೀರಿನ ಸೌಲಭ್ಯವನ್ನು ಹೊಂದಿದೆ.
ಶಿವಕುಮಾರ ರಂಗಮಂದಿರ :ಬಿಸಿಲು ಮತ್ತು ಮಳೆ
ಬರುವ ಸಂದರ್ಭದಲ್ಲಿ ಸಾಹಿತ್ಕಕ, ಸಾಂಸ್ಕೃತಿಕ, ಕ್ರೀಡಾ ಇತ್ಯಾದಿ ಸಮಾರಂಭಗಳನ್ನು ನಡೆಸಲು ತೊಂದರೆ ಆಗದಿರದೆಂದು ಸುಮಾರು 1500 ಜನರು ಕುಳಿತುಕೊಳ್ಳಬಹುದಾದ ತಗಡಿನ ರಂಗಮಂದಿರವಿದೆ.