ಶಿವಸಂಚಾರ

ಶ್ರೀ ಶಿವಕುಮಾರ ಕಲಾಸಂಘದ ದಶಮಾನೋತ್ಸವದ ಕಾಣ್ಕೆಯಾಗಿ 1997ರಲ್ಲಿ ಮೂಡಿದ್ದು ‘ಶಿವಸಂಚಾರ' ರಂಗರೆಪರ್ಟರಿ.ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿ ವೃತ್ತಿಪರತೆಯ ಮೂಲಕ ಸ್ಥಾವರವನ್ನು ನಿರಾಕರಿಸಿ ಜಂಗಮತ್ವದ ಕನಸು ಕಾಣುತ್ತಲಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಕಲ್ಪನೆಗೆ ರಂಗಜಂಗಮದ ಕಲ್ಪನೆ ಕೊಟ್ಟವರು ಹಿರಿಯ ರಂಗಕರ್ಮಿ 'ಸಿಜಿಕೆ'. ವರ್ಷದುದ್ದಕ್ಕೂ ರಂಗಕಹಳೆ ಮೊಳಗಬೇಕು.ಇದಕ್ಕಾಗಿ ಒಂದು ರಂಗರೆಪರ್ಟರಿ ಪ್ರಾರಂಭವಾಗಬೇಕು ಎನ್ನುವ ಸಲಹೆ ನೀಡಿ ಅದಕ್ಕೆ 'ಶಿವಸಂಚಾರ 'ಎನ್ನುವ ಮಹತ್ವದ ಹೆಸರು ಕೊಟ್ಟವರು ಅವರೇ. ಕಲೆಯ ಗಂಧವೇ ಇಲ್ಲದ ಗ್ರಾಮೀಣ ಪ್ರದೇಶದ 20 ಯುವಕ, ಯುವತಿಯರನ್ನು ಪ್ರತಿವರ್ಷ ಆಯ್ಕೆ ಮಾಡಿಕೊಂಡು ಅವರಿಗೆ ರಂಗಕರ್ಮಿಗಳಿಂದ ತರಬೇತಿ ಕೊಡಿಸಲಾಗುವುದು ತರಬೇತಿಯ ಅವಧಿಯಲ್ಲಿ ಕಲಿತ ಮೂರು ನಾಟಕಗಳ ಮೊದಲ ಪ್ರದರ್ಶನ ನವಂಬರ್ ಮೊದಲ ವಾರದಲ್ಲಿ ಸಾಣೇಹಳ್ಳಿ ನಾಟಕೋತ್ಸವದಲ್ಲಿ ನಡೆದು ನಂತರ ಐದಾರು ತಿಂಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಅವುಗಳನ್ನ ಪ್ರದರ್ಶಿಸಲಾಗುವುದು.ನಾಟಕ ಪ್ರದರ್ಶನಕ್ಕೆ ಅಪಾರ ಬೇಡಿಕೆ ಬರುತ್ತಿದ್ದು ನಾಟಕಗಳಿಗೆ ಜನರೇ ಬರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಶಿವಸಂಚಾರ ಸುಳ್ಳು ಮಾಡಿದೆ.
ನಾಡಿನ ವಿವಿಧ ಪ್ರದೇಶದ ಜನರು ಶಿವಸಂಚಾರದ ನಾಟಕಗಳನ್ನು ಆಹ್ವಾನಿಸುವ ಪರಿ ನಿಜಕ್ಕೂ ಬೆರಗುಂಟುಮಾಡುವುದು.ಆಧುನಿಕ ಸ್ಪರ್ಶ ಪಡೆದುಕೊಂಡು ತಾಂತ್ರಿಕವಾಗಿ ಪಳಗಿರುವ, ಬಹುರಾಷ್ಟ್ರೀಯ ಕಂಪನಿಗಳ ಬೆಂಬಲವುಳ್ಳ ಅನೇಕ ಸಂಘ-ಸಂಸ್ಥೆಗಳು ಕರ್ನಾಟಕದಲ್ಲಿವೆ. ಆದರೆ ನಮ್ಮ ಸಂಘಟನೆಗಿರುವ ಧಾರ್ಮಿಕ ಪ್ರಭಾವಳಿಯೋ, ಪೂಜ್ಯರ ಮೇಲಿನ ಅಭಿಮಾನವೋ, ಗ್ರಾಮೀಣ ಪ್ರದೇಶವನ್ನೇ ಮುಖ್ಯವಾಗಿರಿಸಿಕೊಂಡ ಕಾರಣಕ್ಕೋ-ಶಿವಸಂಚಾರ ಹೋದಲ್ಲೆಲ್ಲ ಜಾತ್ರೆಯಾಗಿಯೇ ರೂಪುಗೊಂಡಿದೆ. ಗ್ರಾಮೀಣ ಪ್ರದೇಶದ ಹಲವು ಸಾಂಸ್ಕೃತಿಕ ಸಂಘಟನೆಗಳ ಹುಟ್ಟಿಗೆ ಕಾರಣವಾಗಿದೆ. ಭಾರತದಲ್ಲೇ ಅತೀ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿರುವ ಸಾಂಸ್ಕೃತಿಕ ಸಂಸ್ಥೆ ಇದಾಗಿದೆ.ಇದಕ್ಕೆ ಸಾಕ್ಷಿ ಶಿವಸಂಚಾರದ ನಾಟಕಗಳನ್ನು ನೋಡಲು ನಿತ್ಯ ಬರುವ ಸಹಸ್ರ ಸಹಸ್ರ ಸಂಖ್ಯೆಯ ಪ್ರೇಕ್ಷಕರು. ಶಿವಸಂಚಾರ ಇದೀಗ 14ರ ಹೊಸ್ತಿಲಿನಲ್ಲಿದೆ. ಪ್ರತಿವರ್ಷ ಮೂರು ನಾಟಕಗಳಂತೆ ಇದುವರೆಗೆ 42 ವಿಭಿನ್ನ ನಾಟಕಗಳ 1800 ಕ್ಕೂ ಹೆಚ್ಚು ಪ್ರಯೋಗಗಳನ್ನು ನೀಡಲಾಗಿದೆ.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS