ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಶ್ರೀ ಸಿ.ಜಿ. ಕೃಷ್ಣಸ್ವಾಮಿ (2005):

ಸಿಜಿಕೆ ಎಂಬುದು ಒಂದು ಹೆಸರೇ? ಅಷ್ಟೇ ಆದರೆ ಅದಕ್ಕೆ ಅರ್ಥವಿಲ್ಲ. ಅಂಕಿತನಾಮಗಳೆಲ್ಲವೂ ವಸ್ತುವಾಚಕಗಳು. ಸಿ ಜಿ ಕೃಷ್ಣಸ್ವಾಮಿ ಈ ವಸ್ತುವಾಚಕದ ಪರಿಧಿಯಿಂದಾಚೆಗೆ ಜಿಗಿಯುವ ಬಹುದೊಡ್ಡ ಸಂಕೇತ. ಸಂಕೇತಕ್ಕೆ ವಿಸ್ತರಣೆಯ ಗುಣವಿರುತ್ತದೆ. ಹಾಗಾಗಿ ಅದು ಪ್ರತಿಮೆ, ರೂಪಕಗಳಲ್ಲಿ ತನ್ನನ್ನು ತಾನು ಹಿಗ್ಗಿಸಿಕೊಳ್ಳಬಲ್ಲದು. ಸಿಜಿಕೆ ಎಂದೇ ಕನ್ನಡನಾಡಿನ ತುಂಬ ಪ್ರಸಿದ್ಧರಾಗಿರುವ ಸಿ ಜಿ ಕೃಷ್ಣಸ್ವಾಮಿ ಎಂಬ ಹೆಸರಿಗೆ ಈ ಎಲ್ಲ ಸಾಂಕೇತಿಕ ಗುಣವೂ ಬಂದು ಅದೂಂದು ಜಂಗಮತ್ವ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿಬಿಡುತ್ತದೆ. ಹೀಗೆ ನಮ್ಮೆದುರು ನಿಲ್ಲುವ ಕೃಷ್ಣಸ್ವಾಮಿ ಕರ್ನಾಟಕದ ಅಪರೂಪದ ಸಾಂಸ್ಕೃತಿಕ ವ್ಯಕ್ತಿತ್ವ, ಅದರಲ್ಲೂ ಕಲೆಯ ಮೂಲಕ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಸುವ ಅಸಾಧಾರಣ ಜೀವ. ಸಂಸ್ಕೃತಿಯೊಂದು ವಿರೂಪಗೊಳ್ಳುತ್ತಲೋ, ಮರೆವಿಗೆ ಸರಿಯುತ್ತಲೋ ಅಥವಾ ಕಣ್ಮರೆಯಾಗುತ್ತಲೋ ಇರುವ ಸಂಧರ್ಭ ಅತೀವ ಯಾತನೆಯನ್ನು ಅನುಭವಿಸುವಂಥದ್ದು. ಹಿಂದಿನದನ್ನು ಕಳೆದುಕೊಳ್ಳುವ, ಮುಂದಿನದನ್ನು ಅರಗಿಸಿಕೊಳ್ಳಲಾಗದ ಒಂದು ಅತಂತ್ರ ಸಂಕ್ರಮಣಕಾಲ ಯಾವೊತ್ತಿಗೂ ಜನಾಂಗ ಅನುಭವಿಸುವ ಕಿರುಕುಳ. ಅದರಲ್ಲೂ ಕಲೆಗೆ ಸಂಭಂದಿಸಿದ ಜೀವಗಳಂತೂ ತೀವ್ರ ತಲ್ಲಣ, ಆತಂಕಗಳ ನಡುವೇಯೇ ಆ ಅನುಭವಗಳಿಗೆ ಕಲಾತ್ಮಕ ಪ್ರತಿಕ್ರಿಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ತೋರುತ್ತಾರೆ. ಈ ಉರಿಯಲ್ಲಿ ತಮ್ಮನ್ನು ತಾವು ಹದಗೊಳಿಸಿಕೊಳ್ಳಲೂಬಹುದು ಅಥವಾ ಅದರಲ್ಲೇ ಭಸ್ಮವಾಗಲೂಬಹುದು. ಸಿಜಿಕೆ ಈ ಉರಿಯಲ್ಲಿ ತಮ್ಮನ್ನು ಹದಗೊಳಿಸಿಕೊಂಡ, ಆ ಮೂಲಕ ಆ ಸಮಾಜಕ್ಕೆ ಒಂದು ಸಮತೋಲನ ಸ್ಥಿತಿಯನ್ನು ಒದಗಿಸಲು ಪ್ರಯತ್ನಿಸಿದ, ಪ್ರಯತ್ನಿಸುತ್ತಿರುವ ಒಂದು ಸಂಕೀರ್ಣ ವ್ಯಕ್ತಿತ್ವ.
ಜಾತಿಯಿಂದ ಬೇಡ ಅಥಾವ ನಾಯಕ ಅಥವಾ ಪಾಳೇಗಾರರಾದ ಸಿಜಿಕೆಯಲ್ಲಿ ಆ ಜಾತಿಯ ಮೂಲ ಗುಣಗಳು ಇಂದಿಗೂ ಜೀವಂತವಿದೆ. ಇದನ್ನು ಬರೆಯುತ್ತಿರುವ ಲೇಖಕ ಚಿತ್ರದುರ್ಗಕ್ಕೆ ಸೇರಿದವನಾದ್ದರಿಂದ ಅವನಿಗೆ ಪಾಳೇಗಾರಿಕೆಯ ಗತ್ತಿನ ಉಳಿಕೆಗಳ ಅನುಭವ ಇದ್ದೇ ಇದೆ. ದುರ್ಗದ ನಾಯಕರು ದುರ್ಗವನ್ನಾಳಿತ್ತಿರುವಾಗ ಅವರ ನಾಡ ಭಕ್ತಿ, ನುಡಿ ಭಕ್ತಿ, ಜನಪ್ರೀತಿ, ಜೊತೆಗೇ ಸಹಜ ದರ್ಪ ಎಲ್ಲವೂ ದುರ್ಗದ ಜನಕ್ಕೆ ವೇದ್ಯವಾಗಿರುವಂಥದ್ದು. ಸಿಜಿಕೆಯಲ್ಲಿ ಈ ಗುಣ ಒಂದು ಒಣದರ್ಪಣ ರೀತಿಯಲ್ಲ. ಅದೊಂದು ಪ್ರಾಮಾಣಿಕ ಮನಸ್ಸಿನ ನಡಾವಳಿ. ಹಾಗಾಗಿ ಸಿಜಿಕೆಯ ಮಾತುಗಳಲ್ಲಿ ಒಂಚೂರು ಜಾತಿಯ ರಕ್ತದ ವಾಸನೆ ಬಡಿದರೆ ನಾವೆಲ್ಲ ಅದನ್ನು ಸಂಶಯದಿಂದ ನೋಡಬೇಕಾದ್ದಿಲ್ಲ. ಯಾಕೆಂದರೆ ಹುಟ್ಟಿನ ಜಾತಿಯಲ್ಲೇ ಸಾಯುವಂಥವರಲ್ಲ. ಅವರು ಅದನ್ನೂ ಮೀರಬಲ್ಲರು. ಮೀರಿ ಬದುಕಬಲ್ಲರು. ಹಾಗೇ ಬದುಕುತ್ತಿದ್ದಾರೆ ಸಿಜಿಕೆ. ಜಾತಿ ಅದು ತಮ್ಮದೇ ಇರಬಹುದು, ಬ್ರಾಹ್ಮಣ, ಲಿಂಗಾಯತ, ಕುರುಬ, ಹೊಲೆಯ, ಮಾದಿಗ ಯಾವುದೇ ಇರಬಹುದು: ಅವುಗಳಲ್ಲಿರುವ ಅವಗುಣಗಳನ್ನೇ ಎತ್ತಿ ತೋರಿಸಿ ಕುಟುಕಿ ನುಡಿಯಬಲ್ಲ ಧೀಮಂತಿಕೆ ಸಿಜಿಕೆಯವರಲ್ಲಿದೆ. ಹೀಗಾಗಿ ತನ್ನ ನಡೆಯ ಮೂಲಕ, ಗ್ರಹಿಕೆಯ ಹೊಸತನದ ಮೂಲಕ, ನುಡಿಯ ಸೊಗಸಿನ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಿಜಿಕೆ ಗಳಿಸಿರುವುದು ಸೋಜಿಗ.
ಸಿಜಿಕೆಯಲ್ಲಿ ಗ್ರಾಮಸಂಸ್ಕೃತಿಯೊಂದು ಸ್ಥಾಯಿಯಾಗಿ ನೆಲೆಸಿದೆ. ಅವರು ಬೆಂಗಳೂರಂಥ ಹೈಟೆಕ್ ಸಿಟಿಯಲ್ಲಿದ್ದರೂ ಅಲ್ಲೇ ಒಂದು ಗ್ರಾಮವನ್ನು ಸೃಷ್ಟಿಸಬಲ್ಲರು. ಆ ಅಪಾರ ಜನಜಂಗುಳಿಯ ಗದ್ದಲ, ನಿಯಾನ್, ಸಲ್ಪರ್ ದೀಪಗಳ ಝಗಮಗಿಸುವ ಬೆಳಕಿನಲ್ಲೂ ಮಂಡ್ಯ, ಚಳ್ಳಕೆರೆ, ಸಾಣೇಹಳ್ಳಿಯನ್ನು ಕಾಣುವಂತೆ ಮಾಡಬಲ್ಲರು. ತಮ್ಮ ಗಾಂಧಿ ಕೇಂದ್ರದಲ್ಲಿ ಅದನ್ನು ಮಾಡಿಯೂ ಇದ್ದಾರೆ. ಚಿಂತನೆ, ಕ್ರಿಯೆ ಎರಡೂ ಅಭಿನ್ನವೆಂದು ಖಚಿತವಾಗಿ ನಂಬಿಕೊಂಡಿರುವ ಸಿಜಿಕೆ ಕೊನೆಗೆ ಆರಿಸಿಕೊಂಡದ್ದು ಸಾಣೇಹಳ್ಳಿಯನ್ನು. ಅದನ್ನೇ ಅವರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡದ್ದಕ್ಕೂ ಇದೇ ಕಾರಣ. ತಮ್ಮ ಚಿಂತನೆಗಳಿಗೆ ಎಲ್ಲಿ ಅಭಿವ್ಯಕ್ತಿ ಸಿಕ್ಕುತ್ತದೋ ಅದು ತನ್ನದೇ ಕ್ಷೇತ್ರವೆಂಬ ಕರುಳಸಂಬಂಧವನ್ನು ಏರ್ಪಡಿಸಿಕೊಳ್ಳಬಲ್ಲ ತಾಯಿ ಗುಣ ಸಿಜಿಕೆಯದು. ಅಂಥದೇ ಹೆಂಗರುಳಿನವರು ಸಾಣೇಹಳ್ಳಿಯ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮಿಗಳವರು. ಸ್ವತಃ ಬರಹಗಾರರು, ಮೌಲ್ಯಯುತ ಚಿಂತಕರೂ ಆಗಿರುವ ಶ್ರೀಗಳವರು ಸಿಜಿಕೆಯಂಥ ಜಂಗಮನನ್ನು ಹಿಡಿದಿಟ್ಟಿರುವುದು ಒಂದು ಪವಾಡ. ಸೂಜಿಗಲ್ಲಿನಂಥ ಪರಸ್ಪರ ವ್ಯಕ್ತಿತ್ವವುಳ್ಳ ಈ ಎರಡೂ ಜೀವಗಳ ನಡುವೆ ಅವರ್ಣನೀಯವಾದ ಕರುಳ ತುಡಿತವೊಂದು ಕೆಲಸ ಮಾಡಿರುವಂತ್ತಿದೆ. ಮಾರ್ಕ್ಸಿಸ್ಟ್ ಚಿಂತನೆಯ ರಕ್ತದ ಸಿಜಿಕೆ ಎಲ್ಲಿ! ವಚನ ಕ್ರಾಂತಿಯ ರಕ್ತದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳೆಲ್ಲಿ ಎಂದರೆ ಅದು ನಮ್ಮ ತಿಳುವಳಿಕೆಯ ಮಿತಿಯೇ. ಬಸವಣ್ಣನ ಧರ್ಮ, ಮಾರ್ಕ್ಸನ ಧರ್ಮ ಆಳದಲ್ಲಿ ಒಂದೇ. ಅವುಗಳ ತಾತ್ವಿಕ ಗ್ರಹಿಕೆ ಕಾಲ-ದೇಶ ಗಳಿಗನುಗುಣವಾಗಿ ರೂಪಗೊಂಡಿದ್ದರೂ ಅವುಗಳ ಕೇಂದ್ರ ಆಶಯ ಒಂದೇ. ಆದ್ದರಿಂದಲೇ ಎರಡು ಧೃವಗಳಂತೆ ಕಾಣುವ ಚಿಂತನೆಗಳು ಆಳದಲ್ಲಿ ಒಂದೇ ಬೇರಿನ ಎರಡು ಚಿಗುರುಗಳು. ಈ ಆಧಾರವೇ ಅವರಿಬ್ಬರನ್ನು ಒಟ್ಟಿಗೆ ಕ್ರಿಯಾಶೀಲರಾಗುವಂತೆ ಮಾಡಿದೆ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ರೂಪಿಸಿದವರು ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಸ್ವತಃ ನಾಟಕಗಳನ್ನು ರಚಿಸಿದವರು. ಆ ನಾಟಕಗಳೆಲ್ಲ ಶರಣಬದುಕಿನ ಸುತ್ತಲೇ ಹೆಣೆದಂಥವು. ಅವು ಜನರಿಗೆ ತಲುಪಬೇಕೆಂದು ಅವರೇ ನಾಟಕ ತಂಡವನ್ನು ಅಂದರೆ ತರಳಬಾಳು ಕಲಾಸಂಘವನ್ನು ಕಟ್ಟಿದವರು. ಆ ಮೂಲಕ ನಾಟಕಗಳನ್ನು ಜನರ ಬಳಿಗೆ ತಾವೇ ಕೊಂಡೊಯ್ದವರು. ಅದೇ ಎರಕದಲ್ಲಿ ರೂಪುಗೊಂಡ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶಿವಕುಮಾರ ಕಲಾಸಂಘ ಸ್ಥಾಪಿಸಿದವರು. ತಮ್ಮ ಪರಮಗುರುಗಳ ಮನೋಭಿಲಾಷೆಯನ್ನು ಮುಂದುವರಿಯುವಂತೆ ಅವರು ಮಾಡಬೇಕಿತ್ತು. ಅದಕ್ಕಾಗಿ ಅವರಿಗೆ ಸಿಜಿಕೆಯಂಥ ಒಂದು ಮಾಧ್ಯಮ ಬೇಕಾಗಿತ್ತು. ಸಿಜಿಕೆ ಅತ್ಯಂತ ಶಕ್ತ ಮಾಧ್ಯಮವಾದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಎಲ್ಲ ಯೋಜನೆಗಳಿಗೂ ಜೀವಂತವೆನಿಸುವ ಕಲಾತ್ಮಕ ರೂಪ ಒದಗಿಸಿದರು. ಅಷ್ಟೇ ಅಲ್ಲ ಪೂಜ್ಯರಿಂದಲೇ ಒಂದು ಸ್ವತಂತ್ರ ನಾಟಕವನ್ನು ರಚಿಸುವಂತೆ ಪ್ರೇರೇಪಿಸಿದರು. ಜಂಗಮದೆಡೆಗೆ ರೂಪಗೊಂಡದ್ದು ಹಾಗೆ. ಅದು ಶಿವಸಂಚಾರದ ಮೂಲಕ ಅನೇಕ ಪ್ರಯೋಗಗಳನ್ನು ಕಂಡಿತು. ಶಿವಸಂಚಾರ ಪೂಜ್ಯರ ಕನಸು. ಅದನ್ನು ನನಸು ಮಾಡಿದವರು ಸಿಜಿಕೆ. ಇಂಥ ಮಹತ್ತರ ಕಾರ್ಯದಿಂದಾಗಿ ಸಾಣೇಹಳ್ಳಿಯಂಥಾ ಒಂದು ಕುಗ್ರಾಮ ಇಡೀ ಕರ್ನಾಟಕ ಭೂಪಟದಲ್ಲಿ ಎದ್ದು ಕಾಣುವಂತಾಯಿತು. ಅದೀಗ ಕರ್ನಾಟಕದ ಒಂದು ಮಗುವಿಗೂ ಗೊತ್ತಿರುವ ಸಂಗತಿ. ಶಿವಸಂಚಾರದ ಚಲನೆ ಕಲ್ಯಾಣದತ್ತ ಗುರಿಯಿರುವಂಥದ್ದು. ಕಲ್ಯಾಣವೆಂಬುದು ಬರೀ ಹೆಸರಲ್ಲ. ಅದೊಂದು ರೂಪಕ. ಈ ರೂಪಕವನು ಆಗುಗೊಳಿಸುವ ಹೊಣೆಗಾರಿಕೆ ಹೊತ್ತವರು ಸಿಜಿಕೆ. ಅವರಿಗೆ ಇಂಬಾಗಿ ತೆತ್ತುಕೊಂಡವರು ಶ್ರೀ ಪಂಡಿತಾರಾಧ್ಯ ಶಿವಾಚಾರ ಸ್ವಾಮಿಗಳವರು.
ಈ ಎಲ್ಲ ಮಹತ್ವದ ಸಾಧನೆಗಾಗಿ ಶ್ರೀ ಶಿವಕುಮಾರ ಪ್ರಶಸ್ತಿ ಸಿಜಿಕೆಗೆ ಲಬಿಸಿದೆ. ಅದು ಯೊಗ್ಯವಾದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿದೆ. ಪ್ರಶಸ್ತಿ, ಕೀರ್ತಿ ಇತ್ಯಾದಿಗಳಿಗೆಲ್ಲ ದೂರವೇ ಇರುವ ಸಿಜಿಕೆ ಮೊದಲು ಪ್ರಶಸ್ತಿಯನ್ನು ನಿರಾಕರಿಸಿ ಅದರ ಹೆಸರೆತ್ತಿದರೆ ಸಿಡಿಮಿಡಿಗೊಂಡವರು. ಆದರೆ ಕರ್ನಾಟಕದ ಧೀಮಂತರ ಹೃದಯಪೂರ್ವಕ ಒತ್ತಾಯಕ್ಕೆ ಮಣಿದು ಈಗ ಹಸನ್ಮುಖರಾಗಿ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದಾರೆ. ಸಿಜಿಕೆ ಎಂಬ ಸಂಕೇತ ವಿಸ್ತರಿಸಿಕೊಳ್ಳುವುದೇ ಹೀಗೆ. ಈ ಕಳ್ಳುಬಳ್ಳಿಯ ಒಡಲಾಳದ ಮಹಾಚೈತ್ರಾದ ಕನಸುಗಾರನಿಗೆ ಶುಭವಾಗಲಿ ಎಂದು ಹಾರೈಸುವುದಷ್ಟೇ ಈಗ ಉಳಿದಿರುವುದು. ಹೃದಂiiiಂತರಾಳದ ಶುಭ ಹಾರೈಕೆಗಳು ಮಿ. ಸಿ ಜಿ ಕೆ.
ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ
ಎನ್ನ ಬಹುರೂಪ ಬಲ್ಲವರಾರೋ!
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ?
ರೇಕಣ್ಣ ಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS