ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಅಶೋಕ ಬಾದರದಿನ್ನಿ (2007):
ಮೂಲತಹ ಧಾರ್ಮಿಕ ಶ್ರದ್ಧೆಯ ಬಾದರದಿನ್ನಿಗೆ ತಮ್ಮ ಆಲೋಚನೆಗಳ ಎರಕವೆಂಬಂತೆ ಕಂಡದ್ದು ಬಸವತತ್ವ ಅಥವಾ ವಿಶಾಲಾರ್ಥದಲ್ಲಿ ಶರಣತ್ವ, ಅದಕ್ಕೂ ಮೊದಲು ಎಪ್ಪತ್ತರ ದಶಕದ ಕಡೆತನಕ ಇಂತಹದೇ ನಿರ್ಧಿಷ್ಟ ಎಂದು ಹೇಳಲಾಗದ,
ಮುಕ್ತವೆಂದು ಹೇಳಬಹುದಾದ ಅನೇಕ ರಂಗಕೃತಿಗಳನ್ನು ಅವರು ನೀಡಿದ್ದಾರೆ. ಅಲ್ಲಿ ಹ್ಯಾಮ್ಲೆಟ್, ಈಡಿಪಸ್, ಮ್ಯಾಕಬೆತ್, ತುಘಲಕ್ ಇಂಥವರೆಲ್ಲ ಇದ್ದರು. ಮುಂದೆ ತಮ್ಮ ಸೈದ್ದಾಂತಿಕ ಸ್ಪಷ್ಟತೆಯಿಂದ ಎಡಪಂಥೀಯ
ಧೋರಣೆಯೇ ಆದ ಶರಣ ಚಳುವಳಿಗೆ ಸಂಬಂದಪಟ್ಟ ಕೃತಿಗಳನ್ನೇ ರಂಗದ ಮೇಲೆ ತರಲು ಬಾದರದಿನ್ನಿ ಪ್ರಯತ್ನಿಸಿದರು.
೧೯೮೧ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ರಂಗತರಬೇತಿ ಶಿಬಿರವನ್ನು ಏರ್ಪಡಿಸಿ ೧೨ನೇ ಶತಮಾನದ ಸುಧಾರಕ ಭಕ್ತಿ ಭಂಡಾರಿ ಬಸವಣ್ಣ ಮತ್ತು ಅನನ್ಯ ಶರಣೆ
ಅಕ್ಕ ಮಹಾದೇವಿ ಕುರಿತ ’ಮರಣವೇ ಮಹಾನವಮಿ’ ಮತ್ತು ’ಶರಣ ಸತಿ ಲಿಂಗಪತಿ’ ನಾಟಕಗಳನ್ನು ನಿರ್ದೇಶಿಸಿದ್ದು ಅವು ೫೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಭಾರತದ ವಿವಿಧೆಡೆಗಳಲ್ಲಿ ಕೊಟ್ಟಿದ್ದು ಅಶೋಕರ ರಂಗನಿರ್ದೇಶನದ ಮಹತ್ವದ
ಘಟ್ಟಗಳಲ್ಲೊಂದು.
೧೯೯೫-೨೦೦೨ರವರೆಗೆ ಚಿತ್ರದುರ್ಗದ ಬೃಹನ್ಮಠದ ಆಶ್ರಯದಲ್ಲಿ ಗ್ರಾಮೀಣ ಮಕ್ಕಳಿಗೆ ರಂಗಭೂಮಿ ಶಿಕ್ಷಣ ದೊರಕಿಸುವ ಅಪರೂಪದ ಕಾರ್ಯಯೋಜನೆಯನ್ನು ಮಾಡಿದರು. ಎಸ್.ಜೆ.ಎಂ ಸಂಗೀತ, ನೃತ್ಯ, ನಾಟಕ ಶಾಲೆಯ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದು
ಅವರ ಗ್ರಾಮ ಕಾಜಿಯನ್ನು ಎತ್ತಿತೋರಿಸುತ್ತದೆ.
೨೦೦೨ರಿಂದ ಬಾಪೂಜಿ ಅಂಗವಿಕಲರ ಸೇವಾ ಸಂಸ್ಥೆಯಲ್ಲಿ ಬಿಇಡಿ, ಡಿಇಡಿ ವಿದ್ಯಾರ್ಥಿಗಳಿಗೆ ’ದಿ ಬೆಸ್ಟ್ ಆಕ್ಟರ್ ಇನ್ ದಿ ವರ್ಲ್ಡ್ ಈಸ್ ದಿ ಬೆಸ್ಟ್ ಟೀಚರ್’ ಎಂಬ ಪರಿಕಲ್ಪನೆಯನ್ನು, ರಂಗಭೂಮಿಯ ಮೂಲಕ ಶಿಕ್ಷಣ ಇಂದಿಗೂ ಒದಗಿಸುತ್ತಿದ್ದಾರೆ.
ಇಂಥ ಅರ್ಹವ್ಯಕ್ತಿಗೆ ದಿನಾಂಕ ೯ನೇ ನವೆಂಬರ್ ೨೦೦೭ರಂದು ’ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಶ್ರೀ ಲಿಂಗೈಕ್ಯ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯರು ಅಲ್ಲಿಂದಲೇ ಇದು ಯೋಗ್ಯವೆಂದು ಹರಸುತ್ತಿರಬಹುದು.
ಯಾಕೆಂದರೆ ಅಶೋಕ ಅವರು ಬರೆದ ನಾಟಕಗಳಿಗೆ ಹೊಸ ರಂಗು, ಹೊಸ ವಿನ್ಯಾಸ ಕೊಟ್ಟವರು, ಬೇಷ್ ಎನಿಸಿಕೊಂಡವರು. ಲಂಕೇಶ್‌ರಂತೆಯೆ ಲಿಂಗೈಕೈಜಗದ್ಗುರುಗಳು ಸುಖಸುಮ್ಮನೆ ಹೊಗಳುವವರಾಗಿರಲಿಲ್ಲ.