ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಶ್ರೀ ಪ್ರಸನ್ನ (2004) :
ಶ್ರೀ ಪ್ರಸನ್ನ ಅವರು ಖ್ಯಾತ ರಂಗನಿರ್ದೇಶಕರು.ಸಮಕಾಲೀನ ಕನ್ನಡ ರಂಗಭೂಮಿಯಲ್ಲಷ್ಟೇ ಅಲ್ಲ, ಭಾರತೀಯ ರಂಗಭೂಮಿಯಲ್ಲೂ ಒಂದು ಮಹತ್ವದ ಹೆಸರು. ಸಾಹಿತ್ಯಿಕ ಒಲವು, ಸೈದ್ಧಾಂತಿಕ ಬದ್ಧತೆ ಹಾಗೂ ರಂಗಮಾಧ್ಯಮದ ಅರಿವು ಇವರ
ರಂಗಚಟುವಟಿಕೆಯ ತಳಪಾಯವಾಗಿದ್ದು, ಅವು ಇವರ ಸ್ವೋಪಜ್ಞತೆಗೆ ಮೆರಗು ನೀಡಿವೆ. ಪ್ರಸನ್ನ ಎಂದೇ ಪ್ರಸಿದ್ಧರಾದ ಅವರ ಪೂರ್ಣ ಹೆಸರು ಆರ್ ಪಿ ಪ್ರಸನ್ನವದನಾಚಾರ್. ಇವರ ತಂದೆ ಪ್ರಹ್ಲಾದಾಚಾರ್, ತಾಯಿ ಹೇಮಾವತಿ.
ಪ್ರಸನ್ನ ಹುಟ್ಟಿದ್ದು ೧೯೫೧ ಮಾರ್ಚ್ ೨೩ ರಂದು (ಕಾಮನ ಹುಣ್ಣಿಮೆ ದಿನ) ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ, ತಮ್ಮ ಪ್ರತಿಭೆ, ಚುರುಕುತನಗಳಿಂದಾಗಿ ಪ್ರಸನ್ನ ಮುಮ್ಮಡಿ ಬಡ್ತಿ ಪಡೆದು ನೇರ ನಾಲ್ಕನೆ ಕ್ಲಾಸಿನಲ್ಲಿ
ವಿದ್ಯಾಭ್ಯಾಸ ಆರಂಭಿಸಿದರು. ಚಿತ್ರದುರ್ಗ, ದಾವಣಗೆರೆ, ಬೆಂಗಳೂರುಗಳಲ್ಲಿ ಶಿಕ್ಷಣ ಪಡೆದು, ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ ಎಸ್ಸಿ (ಕೆಮಿಷ್ಟ್ರಿ- ಡಿಸ್ಟಿಂಕ್ಸನ್ ಬಂಗಾರದ ಪದಕ) ಪದವಿ ಪಡೆದರು.
ಭಾರತದಲ್ಲೇ ಹೆಸರುವಾಸಿಯಾದ ಕಾನಪುರ ಐಐಟಿಯಲ್ಲಿ ಸಂಶೋಧನೆಗೆ ಸೇರಿಕೊಂಡನಂತರ ತಮ್ಮ ಬದುಕಿನ ನಿಜವಾದ ಆಸ್ಥೆ ವಿಜ್ಞಾನವಲ್ಲ; ಸಾಹಿತ್ಯ ಹಾಗೂ ರಂಗಾಸಕ್ತಿ ಎಂಬುದನ್ನು ಮನಗಂಡು ಅವರು ನಾಟಕರಂಗ ಪ್ರವೇಶಿಸಿದರು.
ನಾಟಕದಲ್ಲಿ ವೈಜ್ಞಾನಿಕ ತರಬೇತಿ ಪಡೆಯಲು ಅಪೇಕ್ಷಿಸಿ, ದಿಲ್ಲಿಯ ಎನ್ ಎಸ್ ಡಿ ಯಲ್ಲಿ (ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ) ನಿರ್ದೇಶನ ವಿಷಯದಲ್ಲಿ ವಿಶೇಷ ಅಧ್ಯಯನಮಾಡಿ ಪದವಿ ಪಡೆದರು.
ಕಲೆಗಾಗಿ ನಾಟಕ ಎನ್ನುವುದರಿಂದ ಮಾತ್ರ ರಂಗಭೂಮಿ ಬೆಳೆಯುವುದಿಲ್ಲ, ಅದನ್ನು ಸ್ವೀಕರಿಸಿ ಬೆಳೆಸಬೇಕು; ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಅದನ್ನು ದುಡಿಸಿಕೊಳ್ಳಬೇಕು ಎಂದು ಆಲೋಚಿಸಿದ ಪ್ರಸನ್ನ ಅವರು ಸಾಂಸ್ಕೃತಿಕ ಸಂಘಟನೆ
ಸಮುದಾಯವನ್ನು ಕಟ್ಟಿದರು. ಆಗ ಪ್ರಸನ್ನ ರೂಪಿಸಿದ ಸಾಂಸ್ಕೃತಿಕ ಜಾಥಾ ಕನ್ನಡ ಸಂಸ್ಕೃತಿಯಲ್ಲಿ ಹಾಗೂ ಭಾರತೀಯ ರಂಗಭೂಮಿಯಲ್ಲಿ ಒಂದು ಅಪೂರ್ವ ಮೈಲಿಗಲ್ಲು. ಹೊಸ ಮೌಲ್ಯಗಳತ್ತ ಸಾಂಸ್ಕೃತಿಕ ಜಾಥಾ ಎಂಬ ಧ್ಯೇಯ ವಾಕ್ಯವನ್ನು
ಹೊಂದಿದ ಈ ಜಾಥಾ ಸರ್ವಾಧಿಕಾರಿ ಶಕ್ತಿಯ ವಿರುದ್ಧ ನಡೆಸಿದ ಜನಜಾಗೃತಿ ಕಾರ್ಯಕ್ರಮವಾಗಿತ್ತು.
ದಿಲ್ಲಿಯಲ್ಲಿ ಪ್ರಸನ್ನ ೧೫ ವರ್ಷ ಸತತವಾಗಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ನಾಟಕ ಆಡಿಸಿದ್ದಾರೆ. ಆ ಎಲ್ಲ ನಾಟಕ ಪ್ರಯೋಗಗಳು ಪ್ರಸನ್ನರ ಕಲಾತ್ಮಕ ಬದುಕಿನಲ್ಲಿ ಮಹತ್ವದ ಘಟ್ಟಗಳು ಎಂಬುದನ್ನು ಮರೆಯುವಂತಿಲ್ಲ.
ಅವರ ಹಲವು ಮಹತ್ವದ ಪ್ರಯೋಗಗಳು ಈ ವಿದ್ಯಾರ್ಥಿ ನಾಟಕಗಳ ಮೂಲಕವೇ ಮೈದಾಳಿವೆ. ಭವಭೂತಿಯ ಉತ್ತರ ರಾಮಚರಿತೆ, ಅವರದೇ ರಚನೆಯಾದ ಗಾಂಧೀ, ರಶಿಯನ್ ನಾಟಕ ಪ್ಯೂಜಿಯಾಮಾ, ಸ್ಟ್ರಿಂಡ್ ಬರ್ಗ್‌ನ ದಿ ಫಾದರ್ ಇತ್ಯಾದಿ ಪ್ರಯೋಗಗಳನ್ನು ಸ್ಮರಿಸಬಹುದು.
ಹವ್ಯಾಸಿ ರಂಗಭೂಮಿಯ ತಜ್ಞರು, ಕಲಾವಿದರು ಮತ್ತು ನಿರ್ದೇಶಕರನ್ನೊಳಗೊಂಡ ರೆಪರ್ಟರಿಯೊಂದನ್ನು ವೃತ್ತಿ ನೆಲೆಯಲ್ಲಿ ಕಟ್ಟುವುದು ತುಂಬ ಸಾಹಸದ ಕೆಲಸ. ಕರ್ನಾಟಕದಲ್ಲಿ ಅಂಥ ಮೊಟ್ಟ ಮೊದಲ ರೆಪರ್ಟರಿಯನ್ನು ಪ್ರಸನ್ನ ಹುಟ್ಟುಹಾಕಿದ್ದರು.
ಅದರ ಹೆಸರು ಜನಪದ. ಈ ರೆಪರ್ಟರಿಯು ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ವೇಗೋತ್ಕರ್ಷಕವಾಗಿ ಕೆಲಸ ಮಾಡಿತು. ಗುಣಾತ್ಮಕವಾಗಿ ರಂಗಭೂಮಿಯನ್ನು ಜನತೆಯ ಹತ್ತಿರ ಒಯ್ದಿತು. ಪ್ರಸನ್ನ ಅವರು ದೇಶದ ಮೂಲೆ ಮೂಲೆಗಳಲ್ಲಿ ಹಲವಾರು ರಂಗ ಶಿಬಿರಗಳನ್ನು ನಡೆಸಿದ್ದಾರೆ.
ಶಾಲೆಗಳಲ್ಲಿ ರಂಗಶಿಕ್ಷಣವನ್ನು ಆರಂಭಿಸಬೇಕೆಂದು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.
ಪ್ರಸನ್ನ ಅವರು ಕೆಲವು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ, ಚಿತ್ರೀಕರಿಸಿದ್ದಾರೆ. ಅವುಗಳಲ್ಲಿ ಡಾ. ಲೋಹಿಯಾ, ವಿ ಕೆ ಗೋಕಾಕ ಮತ್ತು ಭರತೇಂದು ಹರಿಶ್ಚಂದ್ರರ ಬಗೆಗಿನ ಕಾಲೇ ಹರಖ್‌ಚಂದ್ ಕೀ ಡ್ಯೌಢೀ ಗಮನಾರ್ಹವಾಗಿವೆ.
ಬ್ಲ್ಯೂ ಹಾರ್ಸಸ್ ಆನ್ ರೆಡ್ ಗ್ರಾಸ್ ಎಂಬ ಮಿಖೈಲ್ ಶಾತ್ರೋವ್‌ನ ನಾಟಕವನ್ನು ಲಾಲ್ ಘಾಸ್ ಪರ್ ನೀಲೇ ಘೋಡೇ (ಕೆಂಪು ಹುಲ್ಲಿನ ಮೇಲೆ ನೀಲಿ ಕುದುರೆಗಳು) ಎಂಬ ಹೆಸರಿನ ಟೆಲಿಚಿತ್ರವನ್ನು ಅವರು ಸಿದ್ಧಪಡಿಸಿದ್ದಾರೆ.
ರಂಗಭೂಮಿಯಲ್ಲಿ ಪ್ರಸನ್ನ ಅವರು ನಡೆದುಬಂದ ದಾರಿ ಮೂವತ್ತು ವರ್ಷಗಳಿಗೂ ಹೆಚ್ಚು ದೀರ್ಘವಾದದ್ದು; ಮಾಡಿದ ಸಾಧನೆ ವಿಶಿಷ್ಟವಾದದ್ದು, ಅಪರೂಪದ್ದು. ಅವರ ನಿರ್ದೇಶನದ ವೈಶಿಷ್ಟ್ಯಗಳನ್ನು ಹೀಗೆ ಕೇಂದ್ರೀಕರಿಸಬಹುದು:
ಹೊಸ ರಂಗ ಶೈಲಿಗಳ ನಿರ್ಮಾತೃ
ಪಾತ್ರಗಳ ಒಳತೋಟಿ ಚಿತ್ರಣದಲ್ಲಿ ಎತ್ತಿದ ಕೈ
ಸಮಕಾಲೀನತೆಗೆ ಒತ್ತು ನೀಡುವುದು
ನಿರ್ದೇಶನದಲ್ಲಿ ಸ್ವೋಪಜ್ಞತೆ, ಪ್ರಸನ್ನ ಮುದ್ರೆ
ಹೊಸ ರಂಗಭಾಷೆಗಾಗಿ ಸತತ ಹುಡುಕಾಟ ನಡೆಸಿ ಅದಕ್ಕೆ ಹೊಸ ನುಡಿಗಟ್ಟು ನೀಡಿದ್ದು
ಅಪೂರ್ವ ವಿನ್ಯಾಸ
ತುಂಬ ಸರಳ ರಂಗಸಜ್ಜಿಕೆಯನ್ನು ಅಳವಡಿಸಿದ್ದು
ನಟರ ಚಲನೆ ಬ್ಲಾಕಿಂಗ್ ಮೂಲಕ ಕಲಾತ್ಮಕವಾದ ಪರಿಣಾಮಕಾರಿ ಕಾಂಪೋಜಿಶನ್
ವಾಸ್ತವ ರಂಗಭೂಮಿ ಕಟ್ಟುವ ಪ臢ಾತ್ಮಕವಾದ ಪರಿಣಾಮಕಾರಿ ಕಾಂಪೋಜಿಶನ್
ವಾಸ್ತವ ರಂಗಭೂಮಿ ಕಟ್ಟುವ ಪ್ರಯತ್ನದಲ್ಲಿ ಮೊದಲಿಗರು. ರಂಗ ವಿನ್ಯಾಸಕ್ಕೆ ವಿಶಿಷ್ಟ ಕೊಡುಗೆ. ಅನುಪಯುಕ್ತ ವಸ್ತುಗಳನ್ನು ಬಳಸಿ ರಂಗಪರಿಕರ, ವೇಷಭೂಷಣಗಳನ್ನು ಸಿದ್ಧಪಡಿಸುವುದು.
ಸತ್ಯ ಮತ್ತು ವಾಸ್ತವಗಳ ನಡುವಿನ ದ್ವಂದ್ವ ಪ್ರಸನ್ನ ಅವರನ್ನು ಆಕರ್ಷಿಸಿದೆ. ಅವರು ನಿರ್ದೇಶನಕ್ಕೆ ಆಯ್ಕೆ ಮಾಡಿಕೊಂಡ ನಾಟಕಗಳಲ್ಲಿ ಈ ಸಾಮಾನ್ಯ ಎಳೆಯೊಂದನ್ನು ಗುರುತಿಸಬಹುದು. ಹಲವು ವೈರುದ್ಧಗಳನ್ನು ಮಣಿಸುವ ಗುಣ
ನಿರ್ದೇಶಕರಿಗೆ ಇರಬೇಕು ಎಂದು ನಂಬುವ ಪ್ರಸನ್ನ ಅವರು ಸಾಹಿತ್ಯ ಹಾಗೂ ಪ್ರದರ್ಶನ ಕಲೆಗಳ ನಡುವೆ, ಜನಪ್ರಿಯತೆ ಹಾಗೂ ಕಲಾತ್ಮಕತೆಗಳ ನಡುವೆ, ಕಲೆ ಹಾಗೂ ಕುಶಲ ಕರ್ಮದ ನಡುವೆ, ನಟ ಹಾಗೂ ಪ್ರೇಕ್ಷಕರ ನಡುವೆ, ಹಳತು-ಹೊಸತಿನ
ನಡುವೆ ನಿಂತು ಸಾಮರಸ್ಯ ಸಾಧಿಸಿದ್ದಾರೆ. ಅವರು ನಿರ್ದೇಶಿಸಿದ ನಾಟಕಗಳ ಸಂಖ್ಯೆ ಸುಮಾರು ಐವತ್ತು. ಅವುಗಳಲ್ಲಿ ತುಘಲಕ್, ಹುಲಿಯ ನೆರಳು, ಒಂದು ಲೋಕಕಥೆ, ದಂಗೆಯ ಮುಂಚಿನ ದಿನಗಳು, ತದ್ರೂಪಿ, ಪ್ಯೂಜಿಯಾಮಾ, ಗಾಂಧೀ,
ಉತ್ತರ ರಾಮಚರಿತ, ಹದ್ದುಮೀರಿದ ಹಾದಿ, ಲಾಲ್ ಘಾಸ್ ಪರ್ ನೀಲೇ ಘೋಡೇ, ಪುಗಳೆಂದಿ ಪ್ರಹಸನ, ಹ್ಯಾಮ್ಲೆಟ್ ಮುಂತಾದವುಗಳನ್ನು ಹೆಸರಿಸಬಹುದು.
ಪ್ರಸನ್ನ ಯಾವುದೇ ಕಾಲದ, ಯಾವುದೇ ಭಾಷೆಯ ನಾಟಕವನ್ನು ಕೈಗೆತ್ತಿಕೊಂಡರೂ ತನ್ನ ಸಮಕಾಲೀನ ಸಾಂಸ್ಕೃತಿಕ ಸಂದರ್ಭಕ್ಕೆ ಪ್ರಸ್ತುತವಾಗುವಂತೆ ಆ ಪ್ರಯೋಗವನ್ನು ಸಿದ್ಧಪಡಿಸುತ್ತಾರೆ. ನಿರ್ದೇಶನ ಪ್ರಕ್ರಿಯೆಯ ಎಲ್ಲ ಹಂತಗಳನ್ನೂ
ತುಂಬಾ ಕಾಳಜಿಯಿಂದ ನಿರ್ವಹಿಸುತ್ತಾರೆ. ಪ್ರಸನ್ನರ ಪೇಂಟಿಂಗ್ ಆಸಕ್ತಿ, ಪ್ರಜ್ಞೆಗಳು ಅವರ ನಾಟಕದಲ್ಲಿ, ಬೆಳಕಿನ ವಿನ್ಯಾಸದಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ.
ಇಂದು ಸಿನೇಮಾ, ಟಿ ವಿ ಹಾಗೂ ರಂಗಭೂಮಿಯಲ್ಲಿ ಹೆಸರು ಮಾಡಿದ ಹಲವಾರು ಪ್ರಮುಖ ನಟರು ಪ್ರಸನ್ನರ ಗರಡಿಯಲ್ಲೇ ತಯಾರಾಗಿದ್ದು ಅಭಿಮಾನದ ಸಂಗತಿ. ಮುಖ್ಯಮಂತ್ರಿ ಚಂದ್ರು, ಲೋಕನಾಥ್, ಸತ್ಯಸಂಧ, ಜಯಶ್ರೀ,
ಕೆ ವಿ ರಾಜಶೇಖರ್, ರಾಮೇಶ್ವರಿ ವರ್ಮಾ, ಭಾರ್ಗವಿ, ಲಕ್ಷ್ಮೀ ಚಂದ್ರಶೇಖರ್ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಿಂದಿ ರಂಗಭೂಮಿಯಲ್ಲಿ ಇರ್ಪಾನ್ ಖಾನ್, ಮಿತಾ ವಸಿಷ್ಠ, ಮನೋಹರ್ ಸಿಂಗ್, ಉತ್ತರಾ ಬಾವಕರ್
ಮುಂತಾದವರನ್ನು ಹೆಸರಿಸಬಹುದು.
ಇವತ್ತು ಇಡೀ ಭಾರತೀಯ ರಂಗಭೂಮಿಯಲ್ಲಿಯೇ ಮುಂಚೂಣಿಯಲ್ಲಿರುವ ಹೆಸರು ಪ್ರಸನ್ನ. ಮೊದಲ ಹೆಸರು ಅಂದರೂ ಸರಿ. ಕಾರಂತರು ಕಟ್ಟಿದ ರಂಗಭೂಮಿಯ ಸೆಲಿಬ್ರಿಟಿ ಪ್ರಭಾವವನ್ನು ಮೀರಿ ಅದಕ್ಕೆ ವೈಚಾರಿಕ ದಿಕ್ಕನ್ನು ನೀಡಿದವರು ಅವರು. ಕಾರಂತರೇ
ಪ್ರಸನ್ನ ನಿರ್ದೇಶಕರುಗಳ ನಿರ್ದೇಶಕ ಎಂದು ಹೇಳುತ್ತಿದ್ದರು.
ಭಾರತದ ಮಟ್ಟದಲ್ಲಿ ಸಾಹಿತ್ಯದ ಅಭಿರುಚಿ ಹೊಂದಿರುವ ಅಪರೂಪದ, ತುಂಬ ಕ್ರಿಯೇಟಿವ್ ಡೈರೆಕ್ಟರ್ ಪ್ರಸನ್ನ. ಅವರದು ಬಹುಮುಖ ಪ್ರತಿಭೆ. ನಿರ್ದೇಶಕನಿಗೆ ಅರ್ಥ, ರೂಪ ಎರಡೂ ಬೇಕು. ಇವು ಪ್ರಸನ್ನರಿಗೆ ಸಾಧ್ಯವಾಗಿವೆ.
ಸಾಹಿತ್ಯಿಕ ಸೂಕ್ಷ್ಮತೆ ಜೊತೆಗೆ ಅವರಲ್ಲಿ ದೄಶ್ಯ ಸಾಧ್ಯತೆಯ ಅರಿವು ಇದೆ. ನಿರ್ದೇಶಕನಿಗೆ ಇನ್‌ಸೈಟ್ ಇಲ್ಲದಿದ್ದರೆ ಸಾಧ್ಯವಿಲ್ಲ. ಅದನ್ನು ಪ್ರಸನ್ನ ಸಾಧ್ಯಗೊಳಿಸಿದ್ದಾರೆ. ಪ್ರಸನ್ನರಿಗೆ ರಂಗಭೂಮಿ ಒಂದು ಪ್ರಜ್ಞಾಪೂರ್ವಕ
ಆಕ್ಟಿವಿಸಮ್ ಆಗಿದೆ, ಕಾಯಕವಾಗಿದೆ. ಮೈಸೂರಿನಲ್ಲಿರುವ ರಂಗಾಯಣ ರಂಗ ಸಂಸ್ಥೆಗೆ ನಿರ್ದೇಶಕರಾಗಿ ಬಿ ವಿ ಕಾರಂತರ ನಂತರ ರಾಷ್ಟ್ರ ಮಟ್ಟದ ಖ್ಯಾತಿ, ರಂಗ ಸಮೃದ್ಧಿ ಮತ್ತು ಪ್ರಚಾರವನ್ನು ತಂದುಕೊಟ್ಟ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ.
ರಂಗಾಯಣದ ವಿವಿಧ ಆಯಾಮಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಆರ್ಥಿಕವಾಗಿಯೂ ಅದನ್ನು ಸಬಲಗೊಳಿಸಿದರು. ಅವರು ಆರಂಭಿಸಿದ ಪ್ರತಿ ಶನಿವಾರ, ರವಿವಾರದ ನಿರಂತರ ನಾಟಕ ಪ್ರಯೋಗಗಳು ಮೈಸೂರಿನ ಕಲೆ ಹಾಗೂ ಸಾಂಸ್ಕೄತಿಕ ಗೌರವವನ್ನು ಹೆಚ್ಚಿಸಿವೆ.
ಕಲಾವಿದರ ಆತ್ಮಗೌರವ ಹೆಚ್ಚುವಂತೆ ಅವರನ್ನು ಪ್ರೋತ್ಸಾಹಿಸಿ ಹೊಸ ಉತ್ಸಾಹವನ್ನು ತುಂಬಿದುದನ್ನು ಹೆಮ್ಮೆಯಿಂದ ನೆನೆಯಬಹುದು. ಇಂದು ಎನ್ ಎಸ್ ಡಿ ಯ ನಂತರ ರಾಷ್ಟ್ರಮಟ್ಟದ ಪ್ರಸಿದ್ಧ ಸಂಸ್ಥೆಯನ್ನಾಗಿ ರಂಗಾಯಣವನ್ನು ಬೆಳೆಸಿದ
ಶ್ರೇಯಸ್ಸು ಪ್ರಸನ್ನರಿಗೆ ಸಲ್ಲುತ್ತದೆ.
ಪ್ರಸನ್ನ ಎಪ್ಪತ್ತರ ದಶಕದ ಆರಂಭದಿಂದಲೇ ಬರವಣಿಗೆಗೆ ತೊಡಗಿದ್ದಾರೆ. ಅವರ ಪ್ರಕಟಿತ ಸಾಹಿತ್ಯಕೃತಿಗಳ ಸಂಖ್ಯೆ ಕಡಿಮೆಯಾದರೂ ಸಾಹಿತ್ಯಿಕ, ಸಾಂಸ್ಕೃತಿಕ ದೄಷ್ಟಿಯಿಂದ ಅವುಗಳ ಮೌಲ್ಯ ಗಮನಾರ್ಹವಾಗಿದೆ.
ಅವರ ಮೊದಲ ಪ್ರಕಟಿತ ನಾಟಕ ಒಂದು ಲೋಕಕಥೆ (೧೯೭೮). ಇದುವರೆಗೆ ಅವರ ಎಂಟು ನಾಟಕಗಳು, ಎರಡು ಕವನ ಸಂಕಲನಗಳು, ಎರಡು ಕಾದಂಬರಿ ಮತ್ತು ಒಂದು ವಿಮರ್ಶಾ ಕೃತಿ ಪ್ರಕಟವಾಗಿವೆ. ಪ್ರಸನ್ನ ಅವರು ತಮ್ಮ
ಯೋಜನೆಗಳನ್ನು ಸಾಕಾರಗೊಳಿಸಲು ಸಂಘ-ಸಂಸ್ಥೆಗಳನ್ನು ತುಂಬ ಉತ್ಸಾಹದಿಂದ ಕಟ್ಟಿದ್ದಾರೆ. ಕುಶಲೆ, ಕವಿ-ಕಾವ್ಯ, ಚರಕ, ದೇಸಿ, ಒಂಟಿದನಿ ಮುಂತಾದ ಸುಂದರವಾದ ಅನ್ವರ್ಥಕವಾದ ಹೆಸರನ್ನಿಟ್ಟು,
ಆ ಸಂಸ್ಥೆಗಳ ಮೂಲಕ ಅವರು ದೇಸೀ ಚಳುವಳಿಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಂಡಿದ್ದಾರೆ.
ಪ್ರಸನ್ನ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ೧೯೮೧ ರಿಂದ ೧೯೮೩ ರವರೆಗೆ ಯುವ ನಾಟಕಕಾರ ಫೆಲೋಶಿಪ್ ಪಡೆದಿದ್ದರು. ಅವರ ತದ್ರೂಪಿ ಹಾಗೂ ಮಹಿಮಾಪುರ ನಾಟಕಗಳು ಕರ್ನಾಟಕ ರಾಜ್ಯ ಸಾಹಿತ್ಯ ಆಕಾಡೆಮಿಯ ಬಹುಮಾನ ಪಡೆದಿವೆ.
ರಂಗಭೂಮಿಗೆ ಇವರ ಕೊಡುಗೆಯನ್ನು ಪರಿಗಣಿಸಿ ರಾಷ್ಟ್ರಮಟ್ಟದ ಶ್ರೇಷ್ಠ ಪ್ರಶಸ್ತಿಯಾದ ನಂದಿಕಾರ್ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ. ಇತ್ತೀಚೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯ ಗೌರವವೂ ಇವರಿಗೆ ಸಂದಿದೆ.
ಈಗ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದಿಂದ- ರಂಗಜಂಗಮರೆಂದೇ ಖ್ಯಾತಿ ಪಡೆದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ೨೦೦೪ ರಲ್ಲಿ ಆರಂಭಿಸಿದ ಪ್ರಪ್ರಥಮ ಶ್ರೀ ಶಿವಕುಮಾರ ರಂಗಪ್ರಶಸ್ತಿ
ಪ್ರಸನ್ನ ಅವರಿಗೆ ಲಭಿಸಿದೆ. ಶ್ರೀಯುತರ ರಂಗಸೇವೆ ಮತ್ತೊಷ್ಟು ಸ್ಮರಣೀಯವಾಗಲಿ ಎಂದು ಹಾರೈಸೋಣ.