ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಜಯಶ್ರೀ (2011) :
ಕುಲ ಕಸುಬಿಗೆ ಕಲಶವಿಟ್ಟ ಕಲಾವಿದೆ
ಕುಲ ಕಸುಬುಗಳು ವಂಶಪಾರಂಪರ್ಯವಾಗಿ ಮುಂದುವರಿಯುವ ಕಾಲ ಇದಲ್ಲ. ನಮ್ಮ ಕುಲ ಕಸುಬು ನಮ್ಗೆ ಸಾಕು. ನಾವು ಹೆಂಗಾರೂ ಇರ‍್ಲಿ, ನಮ್ಮ ಮಕ್ಕಳು ಸುಖವಾಗಿ ಇರ‍್ಲಿ ಅಂತ ತಲತಲಾಂತರದಿಂದ ಬಂದ ಕುಲ ಕಸುಬನ್ನ ಬಿಡಿಸಿ ತಮ್ಮ ಮಕ್ಕಳನ್ನು ಆಧುನಿಕ ವೃತ್ತಿಗಳಿಗೆ
ಅಥವಾ ಕೊನೆಪಕ್ಷ ಜವಾನ ಹುದ್ದೆಯಾದರೂ ಸರಿ ಸರಕಾರಿ ಕೆಲಸಕ್ಕೇ ಸೇರಬೇಕೆಂದು ಇಂದಿನ ಪೋಷಕರು ಬಯಸುತ್ತಿರುವುದು ಸರ್ವೇಸಾಮಾನ್ಯ. ಇಂಥ ಹೊತ್ತಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ ವೃತ್ತಿಯನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆಯ ಶಿಖರಕ್ಕೇರಬಹುದೆನ್ನುವುದು
ಇಂದಿನವರಿಗೆ ಕೇವಲ ಕನಸಾಗಿ ಕಂಡೀತು.
ಹಳೆಬೇರು ಹೊಸ ಚಿಗುರಾಗಿ ಇಂದಿನ ಆಧುನಿಕ ಕನ್ನಡ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳು ಫಲ್ಲವಿಸಿ ಫಲ ಬಿಡುತ್ತಿವೆಯಾದರೂ ಇವುಗಳಿಗೆ ನೆಲೆಯೊದಗಿಸಿದ ವೃತ್ತಿ ಅಥವಾ ಕಂಪನಿ ರಂಗಭೂಮಿ ಮಾತ್ರ ‘ನಾಮಾವಶೇಷ ಎನ್ನುವಷ್ಟರ ಮಟ್ಟಿಗೆ
ಬಂದು ನಿಂತಿದೆ. ಒಟ್ಟಾರೆ ರಂಗಭೂಮಿ ಗುರುತು ಹಿಡಿಯಲಾರದಷ್ಟು ಬದಲಾಗಿದೆ. ಈ ಎಲ್ಲ ವೈಪರಿತ್ಯಗಳ ಮಧ್ಯೆಯೂ ಕಂಪನಿ, ರೆಪರ್ಟರಿ, ಹವ್ಯಾಸಿ, ವೃತ್ತಿ ರಂಗಭೂಮಿ, ಸಿನೆಮಾ, ಗಾಯನ, ನೃತ್ಯ ಈ ಎಲ್ಲ ಕ್ಷೇತ್ರಗಳು ಒಟ್ಟಿಗೆ
ಮೇಳೈಸಿದಂತೆ ಬಂದ ಸವಾಲುಗಳನ್ನು ಎದುರಿಸಿ ಯಶಸ್ವಿಯಾದ ಕೆಲವೇ ಕೆಲವರಲ್ಲಿ ನಾಟಕ ರತ್ನ ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಬಿ ಜಯಶ್ರೀಯವರ ಹೆಸರು ಮುಂಚೂಣಿಯಲ್ಲಿ ನಿಲ್ಲುವುದು.
ಜಯಶ್ರೀಯವರಿಗೆ ಮೊದಲ ಪಾಠಶಾಲೆ ಮನೆಯಲ್ಲ; ರಂಗಭೂಮಿ. ತಮ್ಮ ನಾಲ್ಕನೆಯ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಜಯಶ್ರೀ ಎನ್ ಎಸ್ ಡಿ ಪದವೀಧರೆಯೂ ಹೌದು. ಸೃಜನಾತ್ಮಕ ನಿರ್ದೇಶಕಿಯಾಗಿ, ಅಪ್ರತಿಮ
ನಟಿಯಾಗಿ, ಕಂಚಿನ ಕಂಠದ ಗಾಯಕಿಯಾಗಿ, ನೃತ್ಯ ಸಂಯೋಜಕಿಯಾಗಿ, ಸಂಘಟಕಿಯಾಗಿ ರಂಗಭೂಮಿ ಮತ್ತು ಚಲನಚಿತ್ರ ಮತ್ತೀಗ ರಾಜ್ಯಸಭಾ ಸದಸ್ಯೆಯಾಗಿ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಅದ ವಿಶಿಷ್ಟ ಛಾಪು ಮೂಡಿಸಿದವರು.
ಜಯಶ್ರೀ ಕನ್ನಡ ಜನಪದ ಪರಂಪರೆಯಲ್ಲಿ ಅಡಗಿರುವ ಗತ್ತು, ಗಮ್ಮತ್ತು, ಸತ್ವ, ಆಳ-ಅಗಲಗಳನ್ನರಿತವರು. ಅದರ ಪುನರ್‌ನವೀಕರಣ ಮತ್ತು ರಂಗಸಾಧ್ಯತೆಗಳ ಅವಕಾಶಕ್ಕೆ ಅವರು ಕಂಡುಕೊಂಡ ವೇದಿಕೆ ಬೆಂಗಳೂರಿನ
‘ಸ್ಪಂದನವೆಂಬ ರಂಗಸಂಸ್ಥೆ. ಈ ಸಂಸ್ಥೆಯ ಮೂಲಕ ಕಲಾವಿದರಿಗೆ ಅಭಿನಯ, ಗಾಯನ, ನೃತ್ಯ, ವೃತ್ತಿರಂಗಭೂಮಿಯ ವೈಭವ, ರಂಜನೆ, ರಂಗಗೀತೆ, ನವನವೀನ ವಾದ್ಯಗಳ, ರಂಗತಂತ್ರಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತ
ಬರುತ್ತಿದ್ದಾರೆ. ಜೊತೆಗೆ ಕನ್ನಡದ ಅನೇಕ ಕಾದಂಬರಿಗಳು, ಸಣ್ಣಕಥೆಗಳು, ಕವನಗಳನ್ನು ನಾಟಕಗಳನ್ನಾಗಿ ರೂಪಾಂತರಿಸಿ ಪ್ರದರ್ಶಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ರಂಗಸಂಗೀತ ಮತ್ತು ಜನಪದ ಪ್ರಕಾರಗಳಾದ ಬಯಲಾಟ,
ಕಿನ್ನರಿಜೋಗೇರಾಟ, ಭೂತೇರಾಟ ಗೊಂದಲಿಗರಾಟ, ವೀರಗಾಸೆ ಮುಂತಾದವುಗಳನ್ನು ರಂಗಭೂಮಿಗೆ ಅಳವಡಿಸುವುದರ ಜೊತೆಗೆ ಅಭ್ಯಾಸ ಮಾಡಿ ದಾಖಲೀಕರಿಸಿರುವುದು ಅವರ ಮಹತ್ವದ ಸಾಧನೆಗಳಲ್ಲೊಂದು.
ಕರಿಸಿರುವುದು ಅವರ ಮಹತ್ವದ ಸಾಧನೆಗಳಲ್ಲೊಂದು.
ಜಯಶ್ರೀಯವರು ಸ್ಪಂದನ ತಂಡಕ್ಕೆ ಇದುವರೆಗೆ 35 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ; ‘ಘಾಶೀರಾಮ್ ಕೊತ್ವಾಲ್, ಜಸ್ಮಾ ಓಢನ್, ಬ್ಲಾಕ್‌ಔಟ್, ಕರಿಮಾಯಿ, ನಹಿ ನಹಿ ರಕ್ಷತಿ, ಬ್ಯಾರಿಸ್ಟರ್, ನೀಲಿಕುದುರೆ, ಲಕ್ಷಾಪತಿ ರಾಜನ ಕಥೆ,
ನಾಗಮಂಡಲ, ಸಿರಿಸಂಪಿಗೆ, ಅಗ್ನಿಪಥ, ಉರಿಯ ಉಯ್ಯಾಲೆ, ಚಿತ್ರಪಟ, ಸ್ಮಶಾನ ಕುರುಕ್ಷೇತ್ರ, ಮಂಥರಾ, ಗಿರಿಜಾ ಕಲ್ಯಾಣ, ಸದಾರಮೆ, ಬಾಳೂರ ಗುಡಿಕಾರ ಮುಂತಾದವು ಮುಖ್ಯವಾದವು. ಇವುಗಳಲ್ಲಿ ಕೆಲ ನಾಟಕಗಳು ಭಾರತದಲ್ಲಷ್ಟೇ ಅಲ್ಲದೆ
ಈಜಿಪ್ಟ್, ರಷ್ಯ, ಕೈರೋ, ತಾಷ್ಕೆಂಟ್, ಎಡಿನ್‌ಬರೋ, ಸ್ವೀಡನ್ ಮುಂತಾದ ದೇಶ-ವಿದೇಶದ ಪ್ರಮುಖ ನಗರಗಳಲ್ಲೂ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿವೆ.
ಕರ್ನಾಟಕದ ಪ್ರಸಿದ್ಧ ನಾಟಕ ತಂಡಗಳಾದ ಶಿವಸಂಚಾರ, ತರಳಬಾಳು ಕಲಾಸಂಘ, ಬೆನಕ, ನಟರಂಗ, ರಂಗಸಂಪದ ಮತ್ತು ಕಲಾಗಂಗೋತ್ರಿ ಮುಂತಾದ ನಾಟಕ ತಂಡಗಳಿಗೆ ನಾಟಕ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ‘ತಾಯಿ, ಜೋಕುಮಾರಸ್ವಾಮಿ,
ಟಿಂಗರ ಬುಡ್ಡಣ್ಣ, ಅಂತಿಮಯಾತ್ರೆ, ಬ್ಯಾರಿಸ್ಟರ್, ಕರಿಮಾಯಿ, ಲಕ್ಷಾಪತಿರಾಜನ ಕಥೆ, ಅಗ್ನಿಪಥ, ಚಿತ್ರಪಟ, ಮಂಥರ, ಸದಾರಮೆ, ಬಾಳಭಿಕ್ಷುಕ ಮುಂತಾದವು ಪ್ರಮುಖವಾದವು. ಹೂವಿ ನಾಟಕವನ್ನು ಅಮೆರಿಕೆಯ ICHF ಡಲಾಸ್
ತಂಡಕ್ಕೆ ಇಂಗ್ಲೀಷಿನಲ್ಲಿ ನಿರ್ದೇಶನ ಮಾಡಿದ್ದಾರೆ. ಪೋರ್ಡ್ ಪೌಂಡೇಷನ್ ಅನುದಾನದ ಅಡಿಯಲ್ಲಿ ಕರ್ನಾಟಕದ ಅಪರೂಪದ ಜನಪದ ಪ್ರಕಾರಗಳನ್ನು ಮೂಲರೂಪದಲ್ಲಿ ಅಭ್ಯಾಸ ಮಾಡಿ, ನಾಟಕಗಳಿಗೆ ಅಳವಡಿಸುವ ಪ್ರಯತ್ನದ ಫಲವಾಗಿ
ಮೂಡಿಬಂದಂಥವು ಅಗ್ನಿಪಥ (ಗೊಂದಲಿಗರಾಟ ಆಧಾರಿತ), ಸಿರಿಸಂಪಿಗೆ (ಸಮರ ಕಲೆಯಾಧಾರಿತ), ಚಿತ್ರಪಟ (ಭೂತೇರಾಟ ಆಧಾರಿತ) ನಾಟಕಗಳು.
ಕಳೆದ 5 ದಶಕಗಳ ರಂಗಭೂಮಿಯ ಪ್ರತೀಕವಾಗಿ ನಿಂತಿರುವ ಜಯಶ್ರೀಯವರು ಇದುವರೆಗೆ ವಸ್ತು, ವಿಷಯ, ವಿನ್ಯಾಸ, ರಂಗತಂತ್ರಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರುವ ಸುಮಾರು 50 ಕ್ಕೂ ಹೆಚ್ಚಿನ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಅಲ್ಲದೆ ಹಲವು ನಾಟಕಗಳಲ್ಲಿ ಸ್ವತಃ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಈ ಮೂಲಕ ಕನ್ನಡ ರಂಗಭೂಮಿಗೆ ನುರಿತ ಕಲಾವಿದರು, ಗಾಯಕರು, ತಂತ್ರಜ್ಞರು ಹಾಗೂ ನಿರ್ದೇಶಕರನ್ನು ನೀಡುವುದರ ಜೊತೆಗೆ ಹೊಸ ಹೊಸ ರಂಗ ಸಾಧ್ಯತೆಗಳನ್ನು
ತೋರಿಸಿಕೊಟ್ಟಿದ್ದಾರೆ.
ಜಯಶ್ರೀಯವರು ಬೆಂಗಳೂರಿನ ಎನ್‌ಎಸ್‌ಡಿಯ ರಿಜನಲ್ ರಿಸೋರ್ಸ್ ಸೆಂಟರ್‌ನ ನಿರ್ದೇಶಕಿಯಾಗಿ, ಸಂಗೀತ ನಾಟಕ ಅಕಾಡಮಿ, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿಯಲ್ಲದೆ ಹಲವಾರು ಸರಕಾರೇತರ
ಸಂಘಸಂಸ್ಥೆಗಳ ಸದಸ್ಯರಾಗಿ, ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಸೇವೆಸಲ್ಲಿಸುವುದರ ಮೂಲಕ ರಂಗಭೂಮಿಯಲ್ಲಿನ ತಮ್ಮ ಸಮಗ್ರ ಅನುಭವವನ್ನು ವಿಶ್ವರಂಗಭೂಮಿಗೆ ಧಾರೆಯೆರೆದಿದ್ದಾರೆ.
Read More